Published
1 month agoon
By
Akkare News
ಪುತ್ತೂರು: ಸುಮಾರು 170 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಕಾರ್ಯಾರಂಭ ಮಾಡಿದ ನ್ಯಾಯಾಲಯದ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಸ್ಥಾಪನೆಯಾಗುತ್ತಿದೆ. ನಗರದ ಹೊರವಲಯದ ಆನೆಮಜಲು ಎಂಬಲ್ಲಿ ನಿರ್ಮಾಣಗೊಂಡಿರುವ ಬೃಹತ್ ನ್ಯಾಯಾಲಯ ಸಂಕೀರ್ಣ ಸಂಪೂರ್ಣಗೊಂಡಿದ್ದು, ಜ.31ರಂದು ಲೋಕಾರ್ಪಣೆಗೊಳ್ಳಲಿದೆ.
ಕೆಲವೇ ದಿನಗಳಲ್ಲಿ ಪುತ್ತೂರು ನಗರದ ಹೃದಯ ಭಾಗದಿಂದ ಎಲ್ಲ ಕೋರ್ಟ್‌ಗಳು ಆನೆಮಜಲಿಗೆ ಸ್ಥಳಾಂತರಗೊಳ್ಳಲಿವೆ.
ಪುತ್ತೂರು- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಬನ್ನೂರು ಸಮೀಪದ ಆನೆಮಜಲು ಎಂಬಲ್ಲಿ ನ್ಯಾಯಾಲಯ ಸಂಕೀರ್ಣ ತಲೆ ಎತ್ತಿದೆ. ಇದು ಈಗಿನ ಕೋರ್ಟ್ ಕಟ್ಟಡ ಸ್ಥಳದಿಂದ ಸುಮಾರು 4 ಕಿ.ಮೀ. ದೂರದಲ್ಲಿದೆ. ಪುತ್ತೂರು-ಉಪ್ಪಿನಂಗಡಿ ರಸ್ತೆಯಿಂದ ಒಳಗೆ 500 ಮೀಟರ್ ದೂರದಲ್ಲಿದೆ.
2018ರಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರವಿದ್ದಾಗ, ಬಿಜೆಪಿಯ ಸಂಜೀವ ಮಠಂದೂರು ಶಾಸಕರಾಗಿದ್ದಾಗ ಕೋರ್ಟ್ ಕಾಂಪ್ಲೆಕ್ಸ್ ಮಂಜೂರಾಗಿತ್ತು. ಮೊದಲ ಹಂತದ ಕಾಮಗಾರಿಗೆ 25 ಕೋಟಿ ರೂ.ಬಿಡುಗಡೆಯಾಗಿದ್ದು, 2018ರ ನ.10ರಂದು ಶಿಲಾನ್ಯಾಸ ನೆರವೇರಿತ್ತು. ಗುತ್ತಿಗೆ ವಿಳಂಬದಿಂದ 2019ರ ಮೇ ತಿಂಗಳಲ್ಲಿ ಕಾಮಗಾರಿ ಆರಂಭಗೊಂಡು 2021ರಲ್ಲಿ ಮೊದಲ ಹಂತ ಮುಗಿದಿತ್ತು. 25 ಕೋಟಿಯಲ್ಲಿ 2 ಅಂತಸ್ತಿನ ಕೋರ್ಟ್ ಕಟ್ಟಡ ಮತ್ತು ಪಕ್ಕದಲ್ಲಿ 3 ಕೋಟಿಯ ಬಾರ್ ಅಸೋಸಿಯೇಶನ್ ಕಟ್ಟಡ ನಿರ್ಮಾಣಗೊಂಡಿತ್ತು. 2ನೇ ಹಂತದಲ್ಲಿ 26.9 ಕೋಟಿ ರೂ. ಮಂಜೂರಾಗಿದ್ದು, 2021ರಲ್ಲಿ ಶಿಲಾನ್ಯಾಸ ನಡೆದಿತ್ತು. ಈ ಅನುದಾನದಲ್ಲಿಉಳಿದ 2 ಅಂತಸ್ತು ಕಟ್ಟಡ, ಅಭಿಲೇಖಾಲಯ ಕಟ್ಟಡ, ರಸ್ತೆ ಮತ್ತಿತರ ಮೂಲಸೌಕರ್ಯಗಳು ನಿರ್ಮಾಣಗೊಂಡಿವೆ. ಈಗ ಇಡೀ ಕೋರ್ಟ್ ಕಾಂಪ್ಲೆಕ್ಸ್ ಅತ್ಯಂತ ಭವ್ಯವಾಗಿ ತಲೆ ಎತ್ತಿದೆ.