Published
2 hours agoon
By
Akkare News
ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಆಶಾ ಕಾರ್ಯಕರ್ತೆಯರ ಸ್ಥಾನಗಳನ್ನು ಜನಸಂಖ್ಯೆಗೆ ಅನುಗುಣವಾಗಿ ತರ್ಕಬದ್ಧಗೊಳಿಸುವ ಆದೇಶವನ್ನು ಹಿಂಪಡೆಯುವಂತೆ ಶಾಸಕ ಅಶೋಕ್ ಕುಮಾರ್ ರೈ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ,ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಮಂಗಳೂರು, ಪುತ್ತೂರು ಹಾಗೂ ಸುಳ್ಯ ತಾಲೂಕುಗಳಲ್ಲಿ ಕಳೆದ 2009ನೇ ಸಾಲಿನಿಂದ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ 2025ನೇ ಜೂನ್ ತಿಂಗಳ ಸುತ್ತೋಲೆಯನ್ವಯ ಆಶಾ ಕಾರ್ಯಕರ್ತೆಯರ ಸ್ಥಾನಗಳನ್ನು ಜನಸಂಖ್ಯೆಗೆ ಅನುಗುಣವಾಗಿ ತರ್ಕಬದ್ದಗೊಳಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದ್ದು. 1000 ಜನಸಂಖ್ಯೆಗಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಪ್ರದೇಶಗಳ ಕಾರ್ಯಕರ್ತೆಯರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಆದೇಶ ನೀಡಲಾಗಿದೆ. ಈ ಆದೇಶದ ಪರಿಣಾಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 153 ಕಾರ್ಯಕರ್ತೆಯರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಇವರು ಹಲವಾರು ವರ್ಷಗಳಿಂದ ಗ್ರಾಮೀಣ ಮಟ್ಟದಲ್ಲಿ ಆರೋಗ್ಯ ಜಾಗೃತಿ, ಗರ್ಭಿಣಿಯರ ಆರೈಕೆ, ಮಕ್ಕಳ ಲಸಿಕೆ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಸಾರ್ವಜನಿಕ ಆರೋಗ್ಯ ಕಾರ್ಯಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಹೀಗಾಗಿ ಇಂತಹ ಕಾರ್ಯಕರ್ತೆಯರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವುದು ಅವರಿಗೆ ಹಾಗೂ ಸ್ಥಳೀಯ ಆರೋಗ್ಯ ಸೇವೆಗೆ ಅನಾನುಕೂಲ ಉಂಟುಮಾಡುವ ಸಾಧ್ಯತೆ ಇದೆ. ಆದ್ದರಿಂದ ದಯವಿಟ್ಟು ಈ ಸಂಬಂಧ ಹೊರಡಿಸಿರುವ ಆದೇಶವನ್ನು ಹಿಂಪಡೆದು, ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಯಾವುದೇ ತೊಂದರೆ ಉಂಟಾಗದಂತೆ ಯಥಾಸ್ಥಿತಿಯನ್ನು ಮುಂದುವರಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.