Connect with us

ಇತರ

ಕಡಬದಲ್ಲಿ ಕೋರ್ಟ್‌ ಶೀಘ್ರ ಆರಂಭ

Published

on

ಕಡಬದಲ್ಲಿ ನ್ಯಾಯಾಲಯದ ಚಟುವಟಿಕೆಗಳು ಕಾರ್ಯಾರಂಭಿಸಬೇಕು ಎನ್ನುವ ಜನರ ಬೇಡಿಕೆಗೆ ಮನ್ನಣೆ ದೊರೆತಿದ್ದು, ಬಾಡಿಗೆ ಕಟ್ಟಡದಲ್ಲಿ ನ್ಯಾಯಾಲಯದ ಕಲಾಪ ಆರಂಭಿಸುವ ನಿಟ್ಟಿನಲ್ಲಿ ಪೂರ್ವ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿವೆ.
ಕಡಬ ಪೇಟೆಯಲ್ಲಿ ತಾಲೂಕು ಆಡಳಿತ ಸೌಧದ ಸಮೀಪದಲ್ಲಿರುವ ಸುಂದರ ಗೌಡ ಮಂಡೆಕರ ಅವರ ಮಾಲಕತ್ವದ ಕಟ್ಟಡದ ಒಂದು ಮತ್ತು ಎರಡನೇ ಮಹಡಿಯಲ್ಲಿ ಬಾಡಿಗೆ ಆಧಾರದಲ್ಲಿ ನ್ಯಾಯಾಲಯದ ಕಲಾಪಗಳನ್ನು ನಡೆಸಲು ಬೇಕಾದ ಕೋರ್ಟ್‌ ಹಾಲ್‌, ನ್ಯಾಯಾಧೀಶರ ಕೊಠಡಿ, ಕಡತಗಳ ಕೊಠಡಿ, ಎಪಿಪಿ ಕೊಠಡಿ, ಶೌಚಾಲಯ ಇತ್ಯಾದಿಗಳನ್ನು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳ ಉಸ್ತುವಾರಿಯಲ್ಲಿ ಸಿದ್ಧಪಡಿಸಲಾಗುತ್ತಿದೆ.

ಮುಂದಿನ 2-3 ತಿಂಗಳೊಳಗೆ ಉಚ್ಛ ನ್ಯಾಯಾಲಯದ ಅನುಮತಿ ಲಭಿಸಿ ಕಡಬ ತಾಲೂಕಿನ ವ್ಯಾಪ್ತಿಗೆ ಸಂಬಂಧಿಸಿದ ನ್ಯಾಯಾಲಯದ ಕಲಾಪಗಳು ಕಡಬದಲ್ಲಿಯೇ ನಡೆಯುವ ನಿರೀಕ್ಷೆ ಹೊಂದಲಾಗಿದೆ.
ಪುತ್ತೂರಿನಲ್ಲಿ ಪ್ರತ್ಯೇಕ ಕಲಾಪ
ಕಡಬ ತಾಲೂಕಿನ ವ್ಯಾಪ್ತಿಗೊಳಪಟ್ಟ ಗ್ರಾಮಗಳ ಪ್ರಕರಣಗಳ ಕಡತಗಳನ್ನು ಈಗಾಗಲೇ ಪುತ್ತೂರು ತಾಲೂಕಿನಿಂದ ಬೇರ್ಪಡಿಸಿ ವಿಂಗಡಿಸಲಾಗಿದ್ದು, ಪುತ್ತೂರು ನ್ಯಾಯಾಲಯದಲ್ಲಿ ಕಡಬ ತಾಲೂಕಿನ ವ್ಯಾಪ್ತಿಯ ಪ್ರಕರಣಗಳ ಪ್ರತ್ಯೇಕ ಕಲಾಪಗಳು ನಡೆಯುತ್ತಿವೆ. ನ್ಯಾಯಾಲಯ ಆರಂಭಗೊಂಡು ಕಡಬ ತಾಲೂಕಿಗೆ ಸಂಬಂಧಿಸಿದ ನ್ಯಾಯಾಲಯ ಕಲಾಪಗಳು ಕಡಬದಲ್ಲಿಯೇ ನಡೆಯುವಂತಾದರೆ ಸಾರ್ವಜನಿಕರಿಗೆ ಸಮಯ ಹಾಗೂ ಆರ್ಥಿಕ ಉಳಿತಾಯದಿಂದಾಗಿ ಅನುಕೂಲವಾಗಲಿದೆ. ನೂತನ ಕಟ್ಟಡಗಳು ನಿರ್ಮಾಣವಾಗಲು ಕಾಲಾವಕಾಶ ಬೇಕಿರುವುದರಿಂದ ತಾತ್ಕಾಲಿಕ ನೆಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ನ್ಯಾಯಾಲಯ ಆರಂಭಗೊಳ್ಳಲಿದೆ.

3ಎಕರೆ ಜಮೀನು ಮೀಸಲು
ಕಡಬದಲ್ಲಿ ನ್ಯಾಯಾಲಯ ಸಂಕೀರ್ಣ, ನ್ಯಾಯಾಧೀಶರ ವಸತಿಗೃಹ, ವಕೀಲರ ಭವನ ಹಾಗೂ ನ್ಯಾಯಾಲಯ ಸಿಬಂದಿಗಳ ವಸತಿಗೃಹಗಳ ನಿರ್ಮಾಣಕ್ಕಾಗಿ ಕಡಬ ತಾಲೂಕು ಆಡಳಿತ ಸೌಧದ ಹಿಂಭಾಗದಲ್ಲಿ 3 ಎಕರೆ ಜಮೀನು ಕಾದಿರಿಸಲಾಗಿದೆ. ಕಾದಿರಿಸಿರುವ ಜಮೀನು ಪೊಲೀಸ್‌ ಇಲಾಖೆ ಹಾಗೂ ಕಂದಾಯ ಇಲಾಖೆಯ ಕಚೇರಿಗಳಿಗೆ ಹತ್ತಿರದಲ್ಲಿದ್ದು, ಸಾರ್ವಜನಿಕರಿಗೆ ಬಂದು ಹೋಗಲು ಅನುಕೂಲಕರವಾಗಿ ಎಲ್ಲಾ ರೀತಿಯಿಂದಲೂ ಸೂಕ್ತವಾಗಿದೆ. ಹೈಕೋರ್ಟ್‌ ಸೂಚನೆಯಂತೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳು ಸ್ಥಳ ಪರಿಶೀಲನೆ ನಡೆಸಿ ಕಾದಿರಿಸಿದ ಜಮೀನಿಗೆ ಯಾವ ರೀತಿ ಸಂಪರ್ಕ ರಸ್ತೆ ನಿರ್ಮಿಸಬಹುದು, ಯಾವ ಯಾವ ಭಾಗದಲ್ಲಿ ಕಟ್ಟಡಗಳನ್ನು ರಚಿಸಬಹುದು ಎನ್ನುವ ಕುರಿತು ಸಮಗ್ರ ವರದಿಯನ್ನು ಚೀಫ್‌ ಆರ್ಕಿಟೆಕ್ಟ್‌ಗೆ ಹಸ್ತಾಂತರಿಸಿದ್ದಾರೆ. ಅವರು ನಕ್ಷೆ ತಯಾರಿಸಿ ಪರಿಶೀಲನೆಗಾಗಿ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ನೋಂದಣಿ ಕೇಂದ್ರವೂ ಬರಲಿ
ಕಡಬ ತಾಲೂಕಿನ ಜನರು ನ್ಯಾಯಾಲಯದ ಕಲಾಪಗಳಿಗಾಗಿ ಸುಳ್ಯ ಹಾಗೂ ಪುತ್ತೂರಿಗೆ ಅಲೆಯುವುದನ್ನು ತಪ್ಪಿಸಲು ಕಡಬದಲ್ಲಿಯೇ ನ್ಯಾಯಾಲಯ ಸಂಕೀರ್ಣ ಶೀಘ್ರ ಪ್ರಾರಂಭ ವಾಗಬೇಕು ಎನ್ನುವುದು ಎಲ್ಲರ ಬೇಡಿಕೆ. ನೂತನ ಕಟ್ಟಡಗಳು ನಿರ್ಮಾಣವಾಗಲು ಕಾಲಾವಕಾಶ ಬೇಕಿರುವುದರಿಂದ ಜನರ ಅನುಕೂಲಕ್ಕಾಗಿ ಖಾಸಗಿ ಬಾಡಿಗೆ ಕಟ್ಟಡದಲ್ಲಿ ನ್ಯಾಯಾಲಯದ ಕಲಾಪಗಳು ಆರಂಭವಾಗಲಿದೆ ಎನ್ನುವುದು ಸಂತಸದ ಸಂಗತಿಯಾಗಿದೆ. ಹಾಗೆಯೇ ಕಡಬದಲ್ಲಿ ಉಪ ನೋಂದಣಾಧಿಕಾರಿ (ಸಬ್‌ ರಿಜಿಸ್ಟ್ರಾರ್‌) ಕಚೇರಿಯನ್ನು ಕೂಡ ತೆರೆಯಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version