Connect with us

ಇತರ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ…. ಸಿ ಬಿ ಐ ತನಿಖೆಯಿಂದ ಮಹತ್ವದ ಸಾಕ್ಷಿ ಲಭ್ಯ… 5ಲಕ್ಷ ಕ್ಕೂ ಮಾರಾಟವಾದ ಪ್ರಶ್ನೆ ಪತ್ರಿಕೆ..!!!

Published

on

ನವದೆಹಲಿ: ಇಡೀ ದೇಶಾದ್ಯಂತ ಭಾರಿ ಸಂಚಲನ ಹಾಗೂ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ ಯುಜಿ-2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನಡೆಸುತ್ತಿರುವ ತನಿಖೆಯಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿವೆ. ಪ್ರಾಥಮಿಕ ತನಿಖಾ ವರದಿಗಳ ಪ್ರಕಾರ, ಆರೋಪಿ ಯಶ್ ಯಾದವ್ ಎಂಬಾತನ ಮೂಲಕ ಈ ಸೋರಿಕೆಯಾದ ಪ್ರಶ್ನೆಪತ್ರಿಕೆಯು ರಾಜಸ್ಥಾನವನ್ನು ತಲುಪಿರುವುದು ದೃಢಪಟ್ಟಿದೆ. ಈ ಜಾಲವು ಅತ್ಯಂತ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿದ್ದು, ಲಕ್ಷಾಂತರ ರೂಪಾಯಿಗಳಿಗೆ ಪ್ರಶ್ನೆಪತ್ರಿಕೆಯನ್ನು ಮಾರಾಟ ಮಾಡಲಾಗಿದೆ ಎಂಬ ಆಘಾತಕಾರಿ ಸತ್ಯ ತನಿಖೆಯಿಂದ ಬಯಲಾಗಿದೆ.
ಸಿಬಿಐ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಪ್ರಶ್ನೆಪತ್ರಿಕೆ ಸೋರಿಕೆಯ ಜಾಲದಲ್ಲಿ ಯಶ್ ಯಾದವ್ ಪ್ರಮುಖ ಪಾತ್ರ ವಹಿಸಿದ್ದಾನೆ. ಆತನಿಗೆ ವಿಕಾಸ್ ಬಿವಾಲ್ ಎಂಬಾತನ ಪರಿಚಯವಿತ್ತು. ಈ ವಿಕಾಸ್ ಬಿವಾಲ್‌ನ ತಂದೆಯಾದ ದಿನೇಶ್ ಬಿವಾಲ್, ಸೋರಿಕೆಯಾದ ಪ್ರಶ್ನೆಪತ್ರಿಕೆಯ ಹಾರ್ಡ್ ಕಾಪಿಯನ್ನು ಸ್ಕ್ಯಾನ್ ಮಾಡಿ, ಅದನ್ನು ಪಿಡಿಎಫ್ ಫೈಲ್‌ಗಳಾಗಿ ಪರಿವರ್ತಿಸುವ ಕೆಲಸ ಮಾಡಿದ್ದನು. ಆರೋಪಿಗಳು ಮೊದಲು ಪ್ರಶ್ನೆಪತ್ರಿಕೆಯನ್ನು ತಮ್ಮ ಕೈಯಾರೆ ಬರೆದುಕೊಂಡು, ನಂತರ ಅದನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪಕ್ಕೆ ತಂದಿದ್ದರು. ಬಳಿಕ ಈ ಪಿಡಿಎಫ್ ಪ್ರತಿಗಳನ್ನು ರಾಜಸ್ಥಾನದ ಪ್ರಮುಖ ಶೈಕ್ಷಣಿಕ ಕೇಂದ್ರವಾದ ಸಿಕರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಕೋಚಿಂಗ್ ಸೆಂಟರ್‌ಗಳ ವಿದ್ಯಾರ್ಥಿಗಳಿಗೆ ಹಂಚಲಾಗಿದೆ.

ಬಹಳ ಅಚ್ಚರಿಯ ವಿಚಾರವೆಂದರೆ, ಈ ಹಗರಣದಲ್ಲಿ ಭಾಗಿಯಾಗಿರುವ ಯಶ್ ಯಾದವ್ ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಕಲ್ ಸೈನ್ಸಸ್ (BAMS) ವಿದ್ಯಾರ್ಥಿಯಾಗಿದ್ದಾನೆ. ಇತರರಿಗೆ ನೀಟ್ ಪ್ರಶ್ನೆಪತ್ರಿಕೆ ನೀಡಿದ್ದ ಈತನೇ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ವಿಫಲನಾಗಿದ್ದಾನೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಸಿಕರ್‌ನಲ್ಲಿರುವ ಕೋಚಿಂಗ್ ಸೆಂಟರ್‌ಗಳ ವಿದ್ಯಾರ್ಥಿಗಳು ಈ ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ಪಡೆಯಲು ಬರೋಬ್ಬರಿ 2 ಲಕ್ಷದಿಂದ 5 ಲಕ್ಷ ರೂಪಾಯಿಗಳವರೆಗೆ ಹಣ ಪಾವತಿಸಿದ್ದಾರೆ ಎಂದು ಸ್ವತಃ ವಿದ್ಯಾರ್ಥಿಗಳೇ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾರೆ.

ಪ್ರಕರಣದ ಜಾಡು ಹಿಡಿದು ಹೊರಟಿರುವ ಸಿಬಿಐ ಅಧಿಕಾರಿಗಳು, ಈಗಾಗಲೇ ಸಿಕರ್‌ನ ವಿವಿಧ ಕೋಚಿಂಗ್ ಸಂಸ್ಥೆಗಳ ಸಿಬ್ಬಂದಿ ಹಾಗೂ ಮಾಲೀಕರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಗರಣದ ಹಿಂದಿನ ಪ್ರಮುಖ ರೂವಾರಿ ಯಾರು ಎಂಬುದನ್ನು ಪತ್ತೆ ಹಚ್ಚಲು ತನಿಖಾ ಸಂಸ್ಥೆ ಹಗಲಿರುಳು ಶ್ರಮಿಸುತ್ತಿದೆ. ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಶುಭಂ ಖೈರ್ನಾರ್ ಎಂಬಾತ, ತಾನು ಈ ಹಗರಣದ ಮಾಸ್ಟರ್ ಮೈಂಡ್ ಅಲ್ಲ ಎಂದು ಅಧಿಕಾರಿಗಳ ಮುಂದೆ ತನ್ನ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾನೆ.

Continue Reading
Click to comment

Leave a Reply

Your email address will not be published. Required fields are marked *

Advertisement