Connect with us

ಇತರ

ಮೂಡುಬಿದ್ರೆ: ಅಕ್ರಮ ಜಾನುವಾರು ಸಾಗಾಟ ಜಾಲ ಪತ್ತೆ; ಇಬ್ಬರು ಕುಖ್ಯಾತ ಆರೋಪಿಗಳ ಬಂಧನ

Published

on

ಮೂಡುಬಿದ್ರೆ: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮೂಡುಬಿದ್ರೆ ಪೊಲೀಸರು ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೆ ಆರೋಪಿಗಳಾದ ಮಹಮ್ಮದ್ ಆರೀಪ್ ಮತ್ತು ಇಮ್ರಾನ್ ಎಂಬುವವರನ್ನು ಬಂಧಿಸಲಾಗಿದ್ದು, ಸಾಗಾಟಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಗುರುವಾರ (ಮೇ 14) ಮುಂಜಾನೆ ಪಿ.ಎಸ್.ಐ ಕೃಷ್ಣಪ್ಪ ಮತ್ತು ತಂಡ ಗಸ್ತಿನಲ್ಲಿದ್ದಾಗ, ಬೆಳುವಾಯಿ ಕಡೆಯಿಂದ ಅಕ್ರಮವಾಗಿ ಜಾನುವಾರು ಸಾಗಾಟವಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ಕ್ರಾಸ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು. ಬೆಳಿಗ್ಗೆ 7:30ರ ಸುಮಾರಿಗೆ ಸಂಶಯಾಸ್ಪದವಾಗಿ ಬಂದ ಮಾರುತಿ ಬ್ರಿಜಾ (KA19 MK 4265) ಕಾರನ್ನು ನಿಲ್ಲಿಸಲು ಸೂಚಿಸಿದಾಗ, ಚಾಲಕ ನಿಲ್ಲಿಸದೆ ವೇಗವಾಗಿ ಪರಾರಿಯಾಗಲು ಯತ್ನಿಸಿದ್ದಾನೆ. ಪೊಲೀಸರು ವಾಹನವನ್ನು ಬೆನ್ನಟ್ಟಿದಾಗ, ಆರೋಪಿಗಳು ಗುಂಡುಕಲ್ಲು ರಸ್ತೆಯ ಮನೆಯೊಂದರ ಕಂಪೌಂಡ್ ಒಳಗೆ ಕಾರು ನುಗ್ಗಿಸಿ ಓಡಿ ಹೋಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಆರೋಪಿಗಳನ್ನು ಸುತ್ತುವರಿದು ಬಂಧಿಸಿದ್ದಾರೆ.

ಪೊಲೀಸರು ವಶಪಡಿಸಿಕೊಂಡ ಕಾರನ್ನು ತಪಾಸಣೆ ನಡೆಸಿದಾಗ ದಬಾಯಿಸುವ ದೃಶ್ಯ ಕಂಡುಬಂದಿದೆ. ಕಾರಿನ ಹಿಂಬದಿ ಸೀಟುಗಳನ್ನು ತೆರವುಗೊಳಿಸಿ, ಅಲ್ಲಿ ಪ್ಲಾಸ್ಟಿಕ್ ಹಾಸಿ ಅದರ ಮೇಲೆ ಕರುವೊಂದರ ಕಾಲು ಮತ್ತು ತಲೆಯನ್ನು ಅತ್ಯಂತ ಹಿಂಸಾತ್ಮಕವಾಗಿ ಹಗ್ಗದಿಂದ ಕಟ್ಟಿ ಹಾಕಿರುವುದು ಪತ್ತೆಯಾಗಿದೆ. ಆರೋಪಿಗಳು ಕಳೆದ ಒಂದು ವಾರದಿಂದ ವಿವಿಧೆಡೆ ದನಗಳನ್ನು ಕಳವು ಮಾಡುತ್ತಿದ್ದು, ಮಾಂಸ ಮಾರಾಟದ ಉದ್ದೇಶದಿಂದ ಈ ಕೃತ್ಯ ಎಸಗುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.

ಬಂಧಿತ ಇಬ್ಬರೂ ಆರೋಪಿಗಳು ಹಳೆಯ ಅಪರಾಧ ಹಿನ್ನೆಲೆ ಹೊಂದಿದ್ದಾರೆ. ಮೊಹಮ್ಮದ್ ಆರಿಫ್: ಈತನ ವಿರುದ್ಧ ಬಜಪೆ, ಬಣಕಲ್ ಮತ್ತು ಮೂಡಬಿದ್ರೆ ಠಾಣೆಗಳಲ್ಲಿ ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಕಳ್ಳತನದ ಪ್ರಕರಣಗಳು ದಾಖಲಾಗಿವೆ. ಇಮ್ರಾನ್: ಈತನ ಮೇಲೆ ಕಾರ್ಕಳ ಮತ್ತು ಮೂಡಬಿದ್ರೆ ಠಾಣೆಗಳಲ್ಲಿ ಮಾದಕ ದ್ರವ್ಯ ಮಾರಾಟ (NDPS), ಜೂಜಾಟ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಯಡಿ ಐದಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಪ್ರಸ್ತುತ ಪೊಲೀಸರು ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದಿದ್ದು, ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement