ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಕಠಾರ ಹೊಳೆಯಲ್ಲಿ ಕಣ್ಮರೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ.
ಮೃತ ವಿದ್ಯಾರ್ಥಿಯನ್ನು ಪುತ್ತೂರಿನ ವಿವೇಕಾನಂದ ಫಾರ್ಮಾಸ್ಯುಟಿಕಲ್ ಕಾಲೇಜಿನ ತೃತೀಯ ವರ್ಷದ ವಿದ್ಯಾರ್ಥಿ ಕಿರಣ್ ಎಂದು ಗುರುತಿಸಲಾಗಿದೆ. ಗದಗ ಮೂಲದವರಾಗಿರುವ ಕಿರಣ್ ಕಲ್ಲಡ್ಕದಲ್ಲಿ ವಾಸ್ತವ್ಯ ಹೊಂದಿದ್ದರು ಎಂದು ತಿಳಿದುಬಂದಿದೆ. ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಹೊಳೆಗಿಳಿದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ನಾಲ್ವರು ವಿದ್ಯಾರ್ಥಿಗಳ ತಂಡವು ಬೆಳ್ಳಿಪ್ಪಾಡಿ ಗ್ರಾಮದ ಕಟಾರ ಬಳಿ ಹರಿಯುವ ಕುಮಾರಧಾರ ನದಿಗೆ ಸ್ನಾನ ಮಾಡಲು ತೆರಳಿತ್ತು. ಈ ವೇಳೆ ನೀರಿನ ಆಳ ಮತ್ತು ಸೆಳತದ ಅರಿವಿಲ್ಲದೆ ಇಳಿದಾಗ ಓರ್ವ ವಿದ್ಯಾರ್ಥಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಜೊತೆಯಲ್ಲಿದ್ದ ಉಳಿದ ಮೂವರು ವಿದ್ಯಾರ್ಥಿಗಳು ತಕ್ಷಣವೇ ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ.ಅಗ್ನಿಶಾಮಕ ದಳದ ಸಿಬ್ಬಂದಿ ನಡೆಸಿದ ತೀವ್ರ ಕಾರ್ಯಾಚರಣೆಯಲ್ಲಿ ಮೃತದೇಹ ಪತ್ತೆಯಾಗಿದೆ.