Published
2 months agoon
By
Akkare News
ಪುತ್ತೂರು: ಅಲಂಕಾರು ಗ್ರಾಮದ ತೋಟಂತಿಲ ದಿ. ವಾಸುದೇವ ಅಸ್ರಣ್ಣರ ಪುತ್ರ ರಾಮಕೃಷ್ಣ ಅಸ್ರಣ್ಣ (62ವ.) ಅನಾರೋಗ್ಯದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜ.18 ರಂದು ಸ್ವಗೃಹದಲ್ಲಿ ನಿಧನರಾದರು.
ರಾಮಕೃಷ್ಣ ಅಸ್ರಣ್ಣರು ಪ್ರಸಿದ್ಧ ಕ್ಷೇತ್ರ ಈರಕೀ ಮಠದ ಶ್ರೀ ವೆಂಕಟರಮಣ ಉಪಾಧ್ಯಾಯರ ಬಳಿ ವೇದ ಪಾಠ ಕಲಿತು, ನಂತರ ಪೇಜಾವರ ವಿಶ್ವೇಶತೀರ್ಥರು ಕಲಿತ ಶಾಲೆ ಶ್ರೀರಾಮಕುಂಜೇಶ್ವರ ಸಂಸ್ಕೃತ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದು, ಕುಕ್ಕೆ ಸುಬ್ರಹ್ಮಣ್ಯದ ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ಮಠಾಧೀಶರಾಗಿದ್ದ ಶ್ರೀ ವಿದ್ಯಾಭೂಷಣ ತೀರ್ಥರ ಬಳಿ ಗುರು ಸೇವೆ ನಡೆಸಿದರು.
ಅವರ ನೇಮ ನಿಷ್ಠೆ ಕಂಡ ಗುರುಗಳು ನರಸಿಂಹ ಸ್ವಾಮಿಯ ನಿತ್ಯ ಆರಾಧನೆಗೆ ನಿಯೋಜಿಸಿದರು. ಅಂದಿನ ಅರ್ಚಕರಾಗಿದ್ದ ಕೇಶವ ಜೋಗಿತ್ತಾಯರು ಸುಬ್ರಹ್ಮಣ್ಯ ಸ್ವಾಮಿಯ ಅರ್ಚಕರಾಗಿ ಪ್ರಮಾಣವಚನ ಬೋಧಿಸಿದರು.
ನಂತರ ಸುಮಾರು 35 ವರ್ಷಗಳ ಕಾಲ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಅರ್ಚಕರಿಗೆ ಭಕ್ತರು ನೀಡುವ ಗೌರವ ಕಾಣಿಕೆ ಸಂಪಾದನೆಯ ಮೂಲ. ಅದು ದೇವರ ಸಂಪತ್ತು ಎಂದು ಭಾವಿಸಿ ಸಿಗುತ್ತಿದ್ದ ಕಾಣಿಕೆಯ ಒಂದು ಪಾಲನ್ನು ದೇವಾಲಯ,ವಿದ್ಯಾಲಯ, ಬಡಬಗ್ಗರಿಗೆ ದಾನ ರೂಪದಲ್ಲಿ ಅರ್ಪಿಸುತ್ತಾ ಆದರ್ಶ ಬದುಕು ಕಂಡವರು. ಇವೆಲ್ಲ ಗುಣಗಳೇ ಅವರನ್ನು ಮತ್ತಷ್ಟು ಎತ್ತರಕ್ಕೆ ಏರಿಸಿತು.
ಮೃತರು ಪತ್ನಿ ಜ್ಞಾನೇಶ್ವರಿ, ಮಕ್ಕಳಾದ ಪ್ರದ್ಯುಮ್ನ ಪ್ರಸಾದ, ಸುಬ್ರಹ್ಮಣ್ಯ, ಪ್ರಜ್ವಲಿತ, ಸೊಸೆ ವಿಜೇತ, ಅಳಿಯ ಅನುರಾಗ, ಕುಟುಂಬಸ್ಥರನ್ನು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.