ರಾಷ್ಟ್ರ ಮಟ್ಟದ ಪವರ್ ಲಿಫ್ಟರ್ ಆಗಿದ್ದ ವ್ಯಕ್ತಿಯೊಬ್ಬರು ಹೊಸ ಕಟ್ಟಡವೊಂದರಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಭೀಕರ ಘಟನೆ ನಗರದ ಪದವಿನಂಗಡಿಯಲ್ಲಿ ನಡೆದಿದೆ.
ಉಳ್ಳಾಲ ಧರ್ಮನಗರ ನಿವಾಸಿಯಾದ ಸಂತೋಷ್ ಪೂಜಾರಿ (45) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ತೊಕ್ಕೊಟ್ಟು ಶಕ್ತಿಭಾರತ್ ವ್ಯಾಯಾಮ ಶಾಲೆಯ ಸಕ್ರಿಯ ಸದಸ್ಯರಾಗಿದ್ದರು. #ಘಟನೆಯ ವಿವರ: ಪದವಿನಂಗಡಿಯ ನೂತನ ಕಟ್ಟಡವೊಂದರಲ್ಲಿ ಸಂತೋಷ್ ಪೂಜಾರಿ ಅವರು ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಆಯತಪ್ಪಿ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಬಿದ್ದ ರಭಸಕ್ಕೆ ಅವರ ತಲೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ವೃತ್ತಿ ಮತ್ತು ಕುಟುಂಬ: ದಿ. ಸುಂದರ ಪೂಜಾರಿ ಪುತ್ರನಾಗಿದ್ದ ಇವರು ಐದು ವರ್ಷಗಳ ಕಾಲ ಒಮಾನ್ ನ ಮಸ್ಕತ್ ನಲ್ಲಿ ವೆಲ್ಡಿಂಗ್ ವೃತ್ತಿಯನ್ನು ನಿರ್ವಹಿಸುತ್ತಿದ್ದರು. ಮದುವೆ ನಂತರ ಊರಿಗೆ ಬಂದವರು ವಾಪಸ್ಸು ತೆರಳಿರಲಿಲ್ಲ. ಬಳಿಕ ಊರಿಗೆ ಮರಳಿ ಉಳ್ಳಾಲ ಬೈಲಿನಲ್ಲಿ ಸ್ವಂತ ವೆಲ್ಡಿಂಗ್ ಶಾಪ್ ತೆರೆದು ನಡೆಸುತ್ತಿದ್ದರು. ಮೃತರು ವಿವಾಹಿತರಾಗಿದ್ದು, ಅವರ ಪತ್ನಿ ಸದ್ಯ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ ಎನ್ನಲಾಗಿದೆ.
ರಾಷ್ಟ್ರ ಮಟ್ಟದ ಸಾಧನೆ ಮಾಡಿದ್ದ ಕ್ರೀಡಾಪಟು ಹಾಗೂ ಆಪ್ತ ಒಡನಾಡಿಯಾಗಿದ್ದ ಸಂತೋಷ್ ಅವರ ಅಕಾಲಿಕ ನಿಧನವು ತೊಕ್ಕೊಟ್ಟು ವ್ಯಾಯಾಮ ಶಾಲೆಯ ಸದಸ್ಯರಿಗೆ ಹಾಗೂ ಅವರ ಆಪ್ತ ವಲಯಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ.