“ಒಂದು ಕೈ ನೆರವಿಗೆ ಚಾಚಿದಾಗ, ಮತ್ತೊಂದು ಬದುಕಿನಲ್ಲಿ ಭರವಸೆಯ ಬೆಳಕು ಮೂಡುತ್ತದೆ” ಎಂಬ ಉದಾತ್ತ ಆಶಯದೊಂದಿಗೆ ಯುವವಾಹಿನಿ (ರಿ.) ಮಾಣಿ ಘಟಕವು ಆರಂಭಿಸಿರುವ ‘ಯುವ ಸೇವಾ ಸ್ಪರ್ಶ’ ಹಾಗೂ ‘ಯುವ ಆರೋಗ್ಯ ಸ್ಪರ್ಶ’ ಎಂಬ ವಿನೂತನ ಸಮಾಜಸೇವಾ ಯೋಜನೆಗಳಿಗೆ ಘಟಕದ ಅಧ್ಯಕ್ಷರಾದ ಗಣೇಶ್ ಸಾಯಿ ಕೊಡಾಜೆ ಅವರ ಅಧ್ಯಕ್ಷತೆಯಲ್ಲಿ ಚಾಲನೆ ನೀಡಲಾಯಿತು.
ಯುವ ಸೇವಾ ಸ್ಪರ್ಶ ಯೋಜನೆಯ ಮೊದಲನೇ ಸೇವಾ ಹಸ್ತದಡಿ, ಮಾಣಿ ಗ್ರಾಮದ ದಿವಂಗತ ವೀರಪ್ಪ ಪೂಜಾರಿ ಅವರ ಕುಟುಂಬಕ್ಕೆ ಅಗತ್ಯ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ನಾಲ್ಕು ಹೆಣ್ಣು ಮಕ್ಕಳಿರುವ ಈ ಕುಟುಂಬದಲ್ಲಿ ಮೂವರು ಅನಾರೋಗ್ಯದಿಂದ ಇದ್ದು, ಒಬ್ಬರೇ ದುಡಿದು ಕುಟುಂಬದ ನಿರ್ವಹಣೆ ಮಾಡುತ್ತಿರುವ ಕಷ್ಟಕರ ಪರಿಸ್ಥಿತಿಯನ್ನು ಮನಗಂಡ ಯುವವಾಹಿನಿ, ಒಂದು ತಿಂಗಳಿಗೆ ಸಾಕಾಗುವಷ್ಟು ಆಹಾರ ಸಾಮಗ್ರಿಗಳನ್ನು ನೀಡಿ ಮಾನವೀಯತೆ ಮೆರೆದಿತು.
ಅದೇ ರೀತಿ, ಕಿಡ್ನಿಯ ಆರೋಗ್ಯದ ಸಮಸ್ಯೆ ಇರುವ ಕಡೆ ಶಿವಾಲಯ ಗ್ರಾಮದ ಮೋನಪ್ಪ ಪೂಜಾರಿ ಅವರಿಗೆ ಯುವ ಆರೋಗ್ಯ ಸ್ಪರ್ಶ ಯೋಜನೆಯಡಿ ನೆರವು ಹಸ್ತ ಚಾಚಲಾಯಿತು. ಸಂಕಷ್ಟದಲ್ಲಿರುವ ಕುಟುಂಬಗಳು ಹಾಗೂ ಆರೋಗ್ಯ ಸಮಸ್ಯೆ ಇರುವವರಿಗೆ ನೆರವಾಗುವ ಉದ್ದೇಶದಿಂದ ಆರಂಭಗೊಂಡಿರುವ ಈ ಯೋಜನೆಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಜನರಿಗೆ ಆಶಾಕಿರಣವಾಗಲಿದ್ದ ಈ ಯೋಜನೆ ಮುಂದಿನ ಪ್ರತೀ ತಿಂಗಳು ನಿರಂತರವಾಗಿ ಮುಂದುವರಿಯಲಿದೆ ಎಂದು ಅಧ್ಯಕ್ಷರಾದ ಗಣೇಶ್ ಸಾಯಿಯವರು ತಿಳಿಸಿದರು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷ ಗಣೇಶ್ ಸಾಯಿ ಕೊಡಾಜೆ, ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಕೋಶಾಧಿಕಾರಿ ಡಾ.ತ್ರಿವೇಣಿ ರಮೇಶ್ ಮಜಲ, ಆರೋಗ್ಯ ನಿರ್ದೇಶಕ ರತಿ ಕಡೆ ಶಿವಾಲಯ, ಸಮಾಜ ಸೇವಾ ನಿರ್ದೇಶಕ ಸುರೇಶ್ ಪೂಜಾರಿ ಬಾಕಿಲ, ಮಾಜಿ ಅಧ್ಯಕ್ಷ ಹರೀಶ್ ಪೂಜಾರಿ ಬಾಕಿಲ, ರಮೇಶ್ ಪೂಜಾರಿ ಮುಜಾಲ, ಜಯಂತ ಪೂಜಾರಿ ಬರಿಮಾರು, ಗುರುತತ್ವ ನಿರ್ದೇಶಕ ನಾರಾಯಣ ಶ್ರೀಧರ ಪೂಜಾರಿ ಮುಜಲ ಕಲೆ ಮತ್ತು ಸಾಹಿತ್ಯ ನಿರ್ದೇಶಕ ರಾಜೇಶ್ ಕೋಟ್ಯಾನ್ ಹಾಗೂ ಘಟಕದ ಇತರ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.