Published
3 hours agoon
By
Akkare News
ಬೆಂಗಳೂರು, ನವೆಂಬರ್ 25: ಬೆಂಗಳೂರಿನ ಗಂಗಮ್ಮನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಾಡ್ಜ್ನ ಮೂರನೇ ಅಂತಸ್ತಿನಿಂದ ಪ್ರೇಯಸಿಯನ್ನು ಕೆಳಕ್ಕೆ ತಳ್ಳಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಾಗಿವೆ. ಹಾಸನ ಮೂಲದ ಐಶ್ವರ್ಯ ಸಾವಿನ ಪ್ರಕರಣದಲ್ಲಿ ಪ್ರಿಯಕರ ಸಂತೋಷ್ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರೀತಿಸಿ ಮದುವೆಯಾಗಬೇಕಿದ್ದ ಜೋಡಿಯ ನಡುವೆ ಮೂಡಿದ್ದ ಅನುಮಾನ, ಜಗಳ ಹಾಗೂ ಮದುವೆ ವಿಚಾರದ ಸಂಘರ್ಷವೇ ಕೊಲೆಯಲ್ಲಿ ಅಂತ್ಯಗೊಂಡಿರುವ ಶಂಕೆ ವ್ಯಕ್ತವಾಗಿದೆ. ಅದರಲ್ಲೂ ಸಂತೋಷ್ಗೆ ಇದ್ದ ಒಂದು ಅನುಮಾನವೇ ಐಶ್ವರ್ಯ ಸಾವಿಗೆ ಪ್ರಮುಖ ಕಾರಣವಾಗಿದೆ ಎನ್ನಲಾಗುತ್ತಿದೆ.

ಇದರಿಂದ ಸಂತೋಷ್ ಕುಟುಂಬ ಕೂಡ ಇಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸಿತ್ತು ಎನ್ನಲಾಗಿದೆ. ಆದರೆ ಐಶ್ವರ್ಯ ಮಾತ್ರ ಸಂತೋಷ್ನನ್ನೇ ಮದುವೆಯಾಗಬೇಕೆಂದು ಪಟ್ಟು ಹಿಡಿದಿದ್ದಳು. ಈ ಹಿಂದೆ ಇಬ್ಬರೂ ಹಲವು ಬಾರಿ ಲಾಡ್ಜ್ಗೆ ಹೋಗಿ ಬರುತ್ತಿದ್ದರು. ಇದೇ ವೇಳೆ ಐಶ್ವರ್ಯಳ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಸಂತೋಷ್ ಆಕೆಯನ್ನು ಬೆದರಿಸುತ್ತಿದ್ದ ಎಂಬ ಆರೋಪವೂ ಕೇಳಿಬಂದಿದೆ.

ಆರಂಭದಲ್ಲಿ ಆತ್ಮಹತ್ಯೆ ಪ್ರಕರಣವೆಂದು ಭಾವಿಸಲಾಗಿದ್ದ ಈ ಘಟನೆ ಪೊಲೀಸ್ ತನಿಖೆಯಲ್ಲಿ ಕೊಲೆ ಎಂಬ ಶಂಕೆಗೆ ತಿರುಗಿತ್ತು. ತಾಂತ್ರಿಕ ಸಾಕ್ಷ್ಯಗಳು ಹಾಗೂ ವಿಚಾರಣೆ ವೇಳೆ ಹಲವು ವಿಚಾರಗಳು ಬೆಳಕಿಗೆ ಬಂದಿದ್ದವು. ಇದೀಗ ಆರೋಪಿ ಸಂತೋಷ್ನನ್ನು ಗಂಗಮ್ಮನಗುಡಿ ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ.




