Connect with us

ಇತ್ತೀಚಿನ ಸುದ್ದಿಗಳು

14 ವರ್ಷಗಳಿಂದ ಸೌಜನ್ಯಳ ಆತ್ಮ ಓಡಾಡುತ್ತಿದೆ -ನೂರಕ್ಕೆ ನೂರು ಸತ್ಯ ಸಿಗುತ್ತದೆ: RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್

Published

on

ಬಂಟ್ವಾಳ, ಸೆ.28: ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸಿರುವುದನ್ನು ಸ್ವಾಗತಿಸಿರುವ ಆರ್‌ಎಸ್‌ಎಸ್‌ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್, ತನಿಖಾ ತಂಡದ ಕೆಲವು ಅಧಿಕಾರಿಗಳ ಕುರಿತು ಜನರಲ್ಲಿ ಸಣ್ಣ ಸಂಶಯವಿದೆ ಎಂದು ಹೇಳಿದ್ದಾರೆ. ಬಂಟ್ವಾಳದಲ್ಲಿ ಬಜರಂಗದಳ ಹಾಗೂ ವಿಹಿಂಪ ಹಮ್ಮಿಕೊಂಡಿದ್ದ ಬಿಸಿರೋಡ್ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, “SIT ರಚನೆಯಾಗಿರುವುದು ಒಳ್ಳೆಯದು. ಆದರೆ SITಯಲ್ಲಿರುವ ಎಲ್ಲ ಅಧಿಕಾರಿಗಳ ಬಗ್ಗೆ ಪರಿಪೂರ್ಣ ವಿಶ್ವಾಸ ಮೂಡಿಲ್ಲ. ಸಣ್ಣ ಸಂಶಯ ಇದೆ” ಎಂದು ಹೇಳಿದರು. “ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಒಳ್ಳೆಯ ಕಮಿಷನರ್. ಅವರು ಆ ಕಡೆ, ಈ ಕಡೆ ಹೋಗುವುದಿಲ್ಲ ಎಂಬ ವಿಶ್ವಾಸವಿದೆ. ಆದರೆ ಉಳಿದ ಅಧಿಕಾರಿಗಳ ಬಗ್ಗೆ ನಮಗೆ ಸಂಶಯವಿದೆ. ಅಧಿಕಾರಿಗಳು ಯಾವುದೇ ಒತ್ತಡ, ಪ್ರಭಾವಕ್ಕೆ ಒಳಗಾಗದೆ ಪ್ರಾಮಾಣಿಕವಾಗಿ ತನಿಖೆ ನಡೆಸಬೇಕು” ಎಂದು ಅವರು ಹೇಳಿದರು.

‘14 ವರ್ಷಗಳಿಂದ ಸೌಜನ್ಯಳ ಆತ್ಮ ಓಡಾಡುತ್ತಿದೆ’

“ಕಳೆದ 14 ವರ್ಷಗಳಿಂದ ಸೌಜನ್ಯಳ ಆತ್ಮ ಓಡಾಡುತ್ತಿದೆ. ಬೇರೆ ಯಾವುದೇ ಪ್ರಕರಣ ಈ ರೀತಿಯಾಗಿ ಉಳಿದಿಲ್ಲ. ಈ ಬಾರಿ ಆಕೆಗೆ ನ್ಯಾಯ ಒದಗಿಸುವ ಕೆಲಸವಾಗಬೇಕು.SIT ಅಧಿಕಾರಿಗಳಲ್ಲಿ ನನ್ನ ವಿನಂತಿ ಏನೆಂದರೆ, ಯಾರ ಕಡೆಗೂ ನೋಡದೆ ಸತ್ಯ ಏನೆಂಬುದನ್ನು ಹುಡುಕಬೇಕು.ಪ್ರಾಮಾಣಿಕ ತನಿಖೆ ನಡೆದರೆ ನೂರಕ್ಕೆ ನೂರು ಸತ್ಯ ಹೊರಬರಲಿದೆ” ಎಂದು ಪ್ರಭಾಕರ್ ಭಟ್ ಹೇಳಿದರು.

ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ಉಲ್ಲೇಖಿಸಿದ ಅವರು, “ಈ ಹಿಂದಿನ ತನಿಖೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳನ್ನು ಹೊಸ ತನಿಖಾ ತಂಡದಲ್ಲಿ ಸೇರಿಸಬಾರದು ಎಂಬುದನ್ನು ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಸಂತೋಷ್ ರಾವ್ ಅವರನ್ನು ಪ್ರಕರಣಕ್ಕೆ ಮತ್ತೆ ಸೇರಿಸಬಾರದು ಎಂಬುದನ್ನೂ ಕೋರ್ಟ್ ಹೇಳಿದೆ” ಎಂದು ತಿಳಿಸಿದರು.

‘ಬಲವಾದ ಅಧಿಕಾರಿಗಳಿದ್ದರೆ ವಿಶ್ವಾಸ ಹೆಚ್ಚುತ್ತಿತ್ತು’

“ಅಪರಾಧಿಗಳನ್ನು ಪತ್ತೆಹಚ್ಚುವ ತಾಕತ್ತು ಪೊಲೀಸರಿಗೆ ಇದೆ. ಮಂಗಳೂರು ಪೊಲೀಸ್ ಆಯುಕ್ತರ ರೀತಿಯ ಬಲವಾದ ಇನ್ನಷ್ಟು ಅಧಿಕಾರಿಗಳನ್ನು SITಯಲ್ಲಿ ಸೇರಿಸಬೇಕಿತ್ತು. ಹಾಗೆ ಮಾಡಿದ್ದರೆ ಜನರಲ್ಲಿ ಮತ್ತಷ್ಟು ವಿಶ್ವಾಸ ಮೂಡುತ್ತಿತ್ತು. ಉಳಿದವರು ಏನು ಎಂಬುದು ಜನರಿಗೂ ಗೊತ್ತಿದೆ, ನಿಮಗೂ ಗೊತ್ತಿದೆ. ಆ ರೀತಿಯ ಸಣ್ಣ ಗೊಂದಲ ನಮ್ಮಲ್ಲಿದೆ” ಎಂದು ಅವರು ಹೇಳಿದರು.

ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ರಾಜ್ಯ ಸರ್ಕಾರವು ಐಜಿಪಿ ಎನ್. ಶಶಿಕುಮಾರ್ ನೇತೃತ್ವದಲ್ಲಿ ಐವರು ಸದಸ್ಯರ SIT ರಚಿಸಿದೆ. ಮಂಗಳೂರು ನಗರ ಪೊಲೀಸ್‌ ಆಯುಕ್ತ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ ಸೇರಿದಂತೆ ನಾಲ್ವರು ಹಿರಿಯ ಅಧಿಕಾರಿಗಳು ತಂಡದಲ್ಲಿದ್ದಾರೆ. ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement