Published
4 hours agoon
By
Akkare News
ಬಂಟ್ವಾಳ, ಸೆ.28: ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸಿರುವುದನ್ನು ಸ್ವಾಗತಿಸಿರುವ ಆರ್‌ಎಸ್‌ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್, ತನಿಖಾ ತಂಡದ ಕೆಲವು ಅಧಿಕಾರಿಗಳ ಕುರಿತು ಜನರಲ್ಲಿ ಸಣ್ಣ ಸಂಶಯವಿದೆ ಎಂದು ಹೇಳಿದ್ದಾರೆ.
‘14 ವರ್ಷಗಳಿಂದ ಸೌಜನ್ಯಳ ಆತ್ಮ ಓಡಾಡುತ್ತಿದೆ’
“ಕಳೆದ 14 ವರ್ಷಗಳಿಂದ ಸೌಜನ್ಯಳ ಆತ್ಮ ಓಡಾಡುತ್ತಿದೆ. ಬೇರೆ ಯಾವುದೇ ಪ್ರಕರಣ ಈ ರೀತಿಯಾಗಿ ಉಳಿದಿಲ್ಲ. ಈ ಬಾರಿ ಆಕೆಗೆ ನ್ಯಾಯ ಒದಗಿಸುವ ಕೆಲಸವಾಗಬೇಕು.SIT ಅಧಿಕಾರಿಗಳಲ್ಲಿ ನನ್ನ ವಿನಂತಿ ಏನೆಂದರೆ, ಯಾರ ಕಡೆಗೂ ನೋಡದೆ ಸತ್ಯ ಏನೆಂಬುದನ್ನು ಹುಡುಕಬೇಕು.ಪ್ರಾಮಾಣಿಕ ತನಿಖೆ ನಡೆದರೆ ನೂರಕ್ಕೆ ನೂರು ಸತ್ಯ ಹೊರಬರಲಿದೆ” ಎಂದು ಪ್ರಭಾಕರ್ ಭಟ್ ಹೇಳಿದರು.
‘ಬಲವಾದ ಅಧಿಕಾರಿಗಳಿದ್ದರೆ ವಿಶ್ವಾಸ ಹೆಚ್ಚುತ್ತಿತ್ತು’
“ಅಪರಾಧಿಗಳನ್ನು ಪತ್ತೆಹಚ್ಚುವ ತಾಕತ್ತು ಪೊಲೀಸರಿಗೆ ಇದೆ. ಮಂಗಳೂರು ಪೊಲೀಸ್ ಆಯುಕ್ತರ ರೀತಿಯ ಬಲವಾದ ಇನ್ನಷ್ಟು ಅಧಿಕಾರಿಗಳನ್ನು SITಯಲ್ಲಿ ಸೇರಿಸಬೇಕಿತ್ತು. ಹಾಗೆ ಮಾಡಿದ್ದರೆ ಜನರಲ್ಲಿ ಮತ್ತಷ್ಟು ವಿಶ್ವಾಸ ಮೂಡುತ್ತಿತ್ತು. ಉಳಿದವರು ಏನು ಎಂಬುದು ಜನರಿಗೂ ಗೊತ್ತಿದೆ, ನಿಮಗೂ ಗೊತ್ತಿದೆ. ಆ ರೀತಿಯ ಸಣ್ಣ ಗೊಂದಲ ನಮ್ಮಲ್ಲಿದೆ” ಎಂದು ಅವರು ಹೇಳಿದರು.
ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ರಾಜ್ಯ ಸರ್ಕಾರವು ಐಜಿಪಿ ಎನ್. ಶಶಿಕುಮಾರ್ ನೇತೃತ್ವದಲ್ಲಿ ಐವರು ಸದಸ್ಯರ SIT ರಚಿಸಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ ಸೇರಿದಂತೆ ನಾಲ್ವರು ಹಿರಿಯ ಅಧಿಕಾರಿಗಳು ತಂಡದಲ್ಲಿದ್ದಾರೆ. ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.