Connect with us

ಇತರ

ಕಾಂಗ್ರೇಸ್ ಮುಖಂಡ ರಕ್ಷಾ ರಾಮಯ್ಯಗೆ ₹8.13 ಕೋಟಿ ವಂಚನೆ: ಗೋವಾ ಕಾರ್ಪೊರೇಟರ್ ಬಂಧನ

Published

on

ಬೆಂಗಳೂರು: ಗೋವಾದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಜಮೀನು ಕೊಡಿಸುವುದಾಗಿ ನಂಬಿಸಿ ಯುವ ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಅವರಿಗೆ ₹8.13 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ರಕ್ಷಾ ರಾಮಯ್ಯ ಅವರ ಕಂಪನಿ ಪ್ರತಿನಿಧಿ ದರ್ಶನ್ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಸದಾಶಿವನಗರ ಠಾಣೆ ಪೊಲೀಸರು, ಗೋವಾದ ಮಪುಸಾ ನಗರಸಭೆ ಕಾರ್ಪೊರೇಟರ್ ತಾರಕ್ ಮಂಗೇಶ್ ಅರೋಲ್ಕರ್ (47) ಎಂಬಾತನನ್ನು ಬಂಧించి ವಿಚಾರಣೆ ನಡೆಸಿದ್ದಾರೆ.

​ಪ್ರಕರಣದ ಹಿನ್ನೆಲೆ: 2023ರಲ್ಲಿ ಗೋವಾದಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸಲು ರಕ್ಷಾ ರಾಮಯ್ಯ ಅವರು ಜಾಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಪರಿಚಯಸ್ಥರ ಮೂಲಕ ಗೋವಾದ ಪೆರ್ನೆಂ ತಾಲೂಕಿನ ದರ್ಗಲ್ ಗ್ರಾಮದಲ್ಲಿ 28,825 ಚದರ ಮೀಟರ್ ಜಮೀನು ಖರೀದಿಗೆ ನಿರ್ಧರಿಸಲಾಗಿತ್ತು. ​ಜಮೀನಿನ ಮಾಲೀಕ ತಾರಕ್ ಮಂಗೇಶ್ ಜತೆ ಮಾತುಕತೆ ನಡೆಸಿ, ಜಮೀನು ಮಾರಾಟ ಒಪ್ಪಂದದ (ಅಗ್ರಿಮೆಂಟ್) ಆಧಾರದ ಮೇಲೆ ಹಂತ ಹಂತವಾಗಿ ಒಟ್ಟು ₹8.13 ಕೋಟಿಯನ್ನು ಮಂಗೇಶ್ ಅವರ ಕಂಪನಿ ಖಾತೆಗೆ ಪಾವತಿಸಲಾಗಿತ್ತು.

ಬೇರೆಯವರಿಗೆ ಜಮೀನು ಮಾರಾಟ: ಹಣ ಪಡೆದಿದ್ದರೂ ಆರೋಪಿ ತಾರಕ್ ಮಂಗೇಶ್ ಜಮೀನನ್ನು ನೋಂದಣಿ (ರಿಜಿಸ್ಟ್ರೇಷನ್) ಮಾಡಿಕೊಡದೆ ಕಾಲಹರಣ ಮಾಡುತ್ತಿದ್ದ. ಹಲವು ವರ್ಷಗಳ ಬಳಿಕ ಅದೇ ಜಮೀನನ್ನು ರಕ್ಷಾ ರಾಮಯ್ಯ ಅವರಿಗೆ ತಿಳಿಸದೇ ಮೂರನೇ ವ್ಯಕ್ತಿಗೆ ಮಾರಾಟ ಮಾಡಿ ವಂಚಿಸಿದ್ದಾನೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ​ವಂಚನೆ ಬೆಳಕಿಗೆ ಬಂದಾಗ ಹಣ ವಾಪಸ್ ನೀಡುವುದಾಗಿ ನಂಬಿಸಿದ್ದ ಆರೋಪಿ, ಬ್ಯಾಂಕ್ ಚೆಕ್‌ಗಳನ್ನು ನೀಡಿದ್ದ. ಆದರೆ, ಆ ಚೆಕ್‌ಗಳು ಬ್ಯಾಂಕ್‌ನಲ್ಲಿ ಡೆಪಾಸಿಟ್ ಆಗದಂತೆ ತಾಂತ್ರಿಕವಾಗಿ ತಡೆದು ವಂಚನೆ ಮುಂದುವರಿಸಿದ್ದ ಎನ್ನಲಾಗಿದೆ.

ಬಾಡಿ ವಾರೆಂಟ್ ಮೇಲೆ ವಶಕ್ಕೆ: ಮತ್ತೊಂದು ₹40 ಲಕ್ಷ ವಂಚನೆ ಪ್ರಕರಣದಲ್ಲಿ ಗೋವಾ ಪೊಲೀಸರಿಂದ ಬಂಧನಕ್ಕೊಳಗಾಗಿ ಅಲ್ಲಿನ ಜೈಲಿನಲ್ಲಿದ್ದ ತಾರಕ್ ಮಂಗೇಶ್‌ನನ್ನು ಸದಾಶಿವನಗರ ಪೊಲೀಸರು ಬಾಡಿ ವಾರೆಂಟ್ (Body Warrant) ಆಧಾರದ ಮೇಲೆ ಕಸ್ಟಡಿಗೆ ಪಡೆದು ಸುದೀರ್ಘ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಮುಗಿದ ಬಳಿಕ ಆತನನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ​ಈ ಜಮೀನು ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಪ್ರಮುಖ ಆರೋಪಿ ಯೋಗೇಶ್ ಎಂಬಾತನಿಗಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement