ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಸರ್ವೆ ಕಲ್ಪಣೆ ಸ.ಹಿ.ಪ್ರಾ.ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ,ಮಕ್ಕಳಿಗೆ ನೀಡುವ ಶಿಕ್ಷಣ ಗುಣಮಟ್ಟದಿಂದ ಕೂಡಿರಬೇಕು, ಗುಣಮಟ್ಟದ ಶಿಕ್ಷಣ ಪಡೆದ ಮಕ್ಕಳು ಭವಿಷ್ಯದಲ್ಲಿ ಸಾಧನೆ ಮಾಡುತ್ತಾರೆ ಶಾಸಕ ಅಶೋಕ್ ಕುಮಾರ್

Published

on

ಪುತ್ತೂರು: ಮಕ್ಕಳಿಗೆ ನೀಡುವ ಶಿಕ್ಷಣ ಗುಣಮಟ್ಟದಿಂದ ಕೂಡಿರಬೇಕು, ಗುಣಮಟ್ಟದ ಶಿಕ್ಷಣ ಪಡೆದ ಮಕ್ಕಳು ಭವಿಷ್ಯದಲ್ಲಿ ಸಾಧನೆ ಮಾಡುತ್ತಾರೆ ಎಂದು ಶಾಸಕ ಅಶೋಕ್ ಕುಮಾರ್ ಹೇಳಿದರು. ಡಿ.30ರಂದು ನಡೆದ ಸರ್ವೆ ಕಲ್ಪಣೆ ಸ.ಹಿ.ಪ್ರಾ.ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವೇಕ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳಿಗೆ ಪ್ರೋತ್ಸಾಹ ಮತ್ತು ಸೂಕ್ತ ಅವಕಾಶಗಳು ಸಿಕ್ಕಿದಾಗ ಅವರ ಪ್ರತಿಭೆ ಬೆಳಗುತ್ತದೆ, ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದ್ದು ಮಕ್ಕಳಿಗೆ ಬೇಕಾಗುವ ಎಲ್ಲ ಸೌಕರ್ಯಗಳು ಮತ್ತು ವ್ಯವಸ್ಥೆಗಳು ಸರಕಾರಿ ಶಾಲೆಗಳಲ್ಲಿ ದೊರಕುತ್ತಿದೆ ಎಂದು ಅವರು ಹೇಳಿದರು.


ಮಕ್ಕಳಲ್ಲಿ ಕನಸು ಬಿತ್ತಬೇಕು-ಲೋಕೇಶ್ ಎಸ್.ಆರ್ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮಾತನಾಡಿ ಸರಕಾರಿ ಶಾಲಾ ಮಕ್ಕಳಿಗೆ ಸರಕಾರ ಹಲವು ಉಚಿತ ಸೌಲಭ್ಯಗಳನ್ನು ನೀಡುತ್ತಿದ್ದು ಇದರ ಬಗ್ಗೆ ಪೋಷಕರು ತಿಳಿದುಕೊಂಡು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಹೆಚ್ಚಾಗಿ ಕಳುಹಿಸಬೇಕು ಎಂದು ಅವರು ಹೇಳಿದರು. ಮಕ್ಕಳಲ್ಲಿ ಕನಸು ಬಿತ್ತಬೇಕು. ಮಕ್ಕಳಿಗಾಗಿ ಆಸ್ತಿ ಕೂಡಿಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದ ಅವರು ಚಿಕ್ಕ ಮಕ್ಕಳಿಗೆ ಮೊಬೈಲ್ ಕೊಡಬೇಡಿ, ಮೊಬೈಲ್ ಕೊಟ್ಟರೆ ನಿಮ್ಮ ಮಕ್ಕಳ ಕಣ್ಣಿಗೆ ತೊಂದರೆಯುಂಟಾಗುತ್ತದೆ, ಎಚ್ಚರಿಕೆ ವಹಿಸಿ ಎಂದು ಅವರು ಹೇಳಿದರು.
ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ-ಎಸ್.ಡಿ ವಸಂತ

ಕಾರ್ಯಕ್ರಮ ಉದ್ಘಾಟಿಸಿದ ಶಾಲಾ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ಎನ್.ಡಿ ವಸಂತ ಮಾತನಾಡಿ ಕಲ್ಪಣೆ ಶಾಲೆಯಲ್ಲಿ ಇತ್ತೀಚೆಗೆ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದ್ದು ಇದರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ಹೇಳಿದರು. ಮಕ್ಕಳ ಸಂಖ್ಯೆ ಕಡಿಮೆಯಾಗಲು ಕಾರಣ ಹಲವು ಇರಬಹುದು ಆದರೆ ನಾವದನ್ನು ಸವಾಲಾಗಿ ಸ್ವೀಕರಿಸಿ ಹೋರಾಟದ ಮೂಲಕ ಮಕ್ಕಳ ಸಂಖ್ಯೆ ಹೆಚ್ಚಿಸಬೇಕು, ಇಲ್ಲಿನ ಮಕ್ಕಳು ಬೇರೆ ಕಡೆಗಳ ಶಾಲೆಗಳಿಗೆ ಹೋಗುತ್ತಿದ್ದ ಪೋಷಕರನ್ನು ಮನವೊಲಿಸಿ ಈ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಹೆಚ್ಚಿಸುವ ಕಾರ್ಯ ಆಗತ್ಯವಾಗಿ ಮಾಡಬೇಕಾಗಿದೆ ಎಂದು ಅವರು ಹೇಳಿದರು.


ಶಿಕ್ಷಣದಿಂದ ಪರಿವರ್ತನೆ ಸಾಧ್ಯ-ಚಂದ್ರಶೇಖರ ಎನ್‌ಎಸ್‌ಡಿ:
ಅಧ್ಯಕ್ಷತೆ ವಹಿಸಿದ್ದ ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಎನ್‌ಎಸ್‌ಡಿ ಮಾತನಾಡಿ ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಪರಿವರ್ತನೆ ಸಾಧ್ಯವಿದ್ದು ಗುಣಮಟ್ಟದ ಶಿಕ್ಷಣ ಪಡೆಯುವುದರಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.

ವರ್ಗಾವಣೆಗೊಂಡ ಶಿಕ್ಷಕರಿಗೆ ಸನ್ಮಾನ:
ಸರ್ವೆ ಕಲ್ಪಣೆ ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ನವೀನ್ ಕುಮಾರ್ ರೈ, ಸುನೀತಾ ಹಾಗೂ ಚಂದ್ರಶೇಖ‌ರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕಿಯರಾದ ಅನಿತಾ, ಉಮಾವತಿ ಹಾಗೂ ಅವಿತಾ ಸನ್ಮಾನಿತರ ಪರಿಚಯ ವಾಚಿಸಿದರು.

ಶಿಕ್ಷಣಾಧಿಕಾರಿಗೆ ಗೌರವಾರ್ಪಣೆ:
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಅವರನ್ನು ಶಾಲಾ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸರ್ವೆ ಕಲ್ಪಣೆ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಂ.ಹನೀಫ್ ರೆಂಜಲಾಡಿಯವರು ೭೦ ವರ್ಷಗಳ ಇತಿಹಾಸ ಇರುವ ಈ ಶಾಲೆಯಲ್ಲಿ ಕಲಿತ ಅದೆಷ್ಟೋ ಮಂದಿ ಇಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ನಮ್ಮ ಶಾಲೆಗೆ ಸದ್ಯಕ್ಕೆ ಸಭಾಂಗಣವೊಂದರ ಅಗತ್ಯವಿದ್ದು ಅದಕ್ಕಾಗಿ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು. ವಾರ್ಷಿಕೋತ್ಸವ ಕಾರ್ಯಕ್ರಮದ ಪೂರ್ವದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಕರುಣಾಕರ ಗೌಡ ಎಲಿಯ, ಎನ್.ಡಿ ವಸಂತ, ಮಹಮ್ಮದ್ ಅಲಿ ಹಾಗೂ ಗಣೇಶ್ ನೇರೋಳಡ್ಕರವರಿಗೆ ಅವರು ಕೃತಜ್ಞತೆ ಸಲ್ಲಿಸಿದರು.ಕಲ್ಲಮ ಶ್ರೀ ಗುರುರಾಘವೇಂದ್ರ ಮಠದ ವ್ಯವಸ್ಥಾಪಕರಾದ ಸೀತಾರಾಮ ಭಟ್ ಕಲ್ಲಮ, ನರಿಮೊಗರು ಕ್ಲಸ್ಟರ್ ಸಿಆರ್‌ಪಿ ಪರಮೇಶ್ವರಿ, ಮುಂಡೂರು ಗ್ರಾ.ಪಂ ಸದಸ್ಯರಾದ ಕರುಣಾಕರ ಗೌಡ ಎಲಿಯ, ನಿವೃತ್ತ ಶಿಕ್ಷಕ ಮಹಾಬಲ ರೈ ಮೊದಲಾದವರು ಮಾತನಾಡಿದರು.

ವೇದಿಕೆಯಲ್ಲಿ ಮುಂಡೂರು ಗ್ರಾ. ಪಂ ಸದಸ್ಯ ಮಹಮ್ಮದ್ ಆಲಿ, ಸರ್ವೆ ಕಲ್ಪಣೆ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಜಯರಾಮ ಶೆಟ್ಟಿ ಕೆ, ಕಾರ್ಯಾಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ವಾರ್ಷಿಕೋತ್ಸವ ಸಮಿತಿ ಕಾರ್ಯದರ್ಶಿ ಸುಂದರ ಬಲ್ಯಾಯ ನೆಕ್ಕಿಲು, ಮುಂಡೂರು ಸಿ.ಎ ಬ್ಯಾಂಕ್ ನಿರ್ದೇಶಕ ಕೊರಗಪ್ಪ ಸೊರಕೆ, ವಿಶ್ವಾಸ್ ಭಟ್, ಪತ್ರಕರ್ತ ಯೂಸುಫ್ ರೆಂಜಲಾಡಿ, ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷೆ ಉಮಾವತಿ ಉಪಸ್ಥಿತರಿದ್ದರು. ಮುಂಡೂರು ಗ್ರಾ.ಪಂ ಸದಸ್ಯರಾದ ಕಮಲೇಶ್ ಎಸ್.ವಿ, ಕಮಲ ನೇರೋಳಡ್ಕ, ವಿಜಯ ಕರ್ಮಿನಡ್ಕ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಯಾದರು.

ಗಮನ ಸೆಳೆದ ಸ್ವಾಗತ ಕಮಾನು:
ಶಾಲಾ ಗೇಟಿನ ಒಳಗಡೆ ಮಾಡಲಾಗಿದ್ದ ಸ್ವಾಗತ ಕಮಾನು ನೋಡುಗರ ಗಮನ ಸೆಳೆಯಿತು. ಶಿಕ್ಷಕ ಸತೀಶ್‌ರವರ ನೇತೃತ್ವದಲ್ಲಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಸಹಕಾರದೊಂದಿಗೆ ವಿಭಿನ್ನವಾಗಿ ನಿರ್ಮಿಸಲಾದ ಸ್ವಾಗತ ಕಮಾನಿನ ಬಳಿಯಿಂದ ಅತಿಥಿಗಳನ್ನು ಬ್ಯಾಂಡ್, ವಾದ್ಯದ ಮೂಲಕ ವೇದಿಕೆಗೆ ಬರ ಮಾಡಿಕೊಳ್ಳಲಾಯಿತು.

ಪಬ್ಲಿಕ್ ಸ್ಕೂಲ್ ಬೇಡಿಕೆಗೆ ಬಿಇಓ ಸ್ಪಂದನೆ:
ಕಲ್ಪಣೆ ಶಾಲೆಯಲ್ಲಿ ಎಲ್‌ ಕೆಜಿ, ಯುಕೆಜಿ ಒಳಗೊಂಡ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಂಜೂರು ಮಾಡಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿಯವರು ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಅವರಲ್ಲಿ ಮನವಿ ಮಾಡಿದರು. ಮನವಿಗೆ ಸಕಾರಾತ್ಮಕವಾಗಿ ಸ್ಪಂಧಿಸಿದ ಶಿಕ್ಷಣಾಧಿಕಾರಿಯವರು ಎಲ್ಲ ಪೂರಕ ವ್ಯವಸ್ಥೆಗಳು ಇದ್ದಲ್ಲಿ ಕೆಪಿಎನ್ ಸ್ಕೂಲ್ ಮಾಡಲು ಇಲಾಖೆಯಿಂದ ಬೇಕಾದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಸಾಂಸ್ಕೃತಿಕ ವೈಭವ:
ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ರೆಂಜಲಾಡಿ ಹಾಗೂ ಸೊರಕೆ ಅಂಗನವಾಡಿ ಪುಟಾಣಿಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪೋಷಕರು, ಊರವರ ಹಾಗೂ ವಿದ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಮುಖ್ಯ ಶಿಕ್ಷಕಿ ಕಮಲಾ ವಾರ್ಷಿಕ ವರದಿ ವಾಚಿಸಿದರು. ಸುಂದರ ಬಲ್ಯಾಯ ವಂದಿಸಿದರು ಶಿಕ್ಷಕಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕ ಸತೀಶ, ಶಿಕ್ಷಕಿಯರಾದ ಜ್ಯೋತಿ, ಅನಿತಾ, ಉಮಾವತಿ, ಅವಿತಾ, ದೀಕ್ಷಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಎಸ್‌ಡಿಎಂಸಿಯವರು, ಅಡುಗೆ ಸಿಬ್ಬಂದಿಗಳು ಸಹಕರಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version