Published
6 months agoon
By
Akkare News
ಮಹಾನಗರ:ವಿಘ್ನವಿನಾಯಕ ಗಣಪನ ಹಬ್ಬಕ್ಕೆ ದಿನಗಣನೆ ಆರಂಭಗೊಂಡಿದ್ದು, ಕೊನೆಯ ಹಂತದ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ.
ಮಣ್ಣಗುಡ್ಡೆ, ರಥಬೀದಿ ಸಹಿತ ಬಹುತೇಕ ಕಡೆಗಳಲ್ಲಿ ಗಣಪತಿ ವಿಗ್ರಹ ತಯಾರಿ ಪೂರ್ಣಗೊಂಡಿದೆ. ಕೆಲವು ಕಡೆಗಳಲ್ಲಿ ಗಣಪತಿ ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡುವ ಕೆಲಸ ಆಗುತ್ತಿದೆ.
ಇದರೊಂದಿಗೆ ಪರಿಸರ ಸ್ನೇಹಿ ಗಣಪನ ಆರಾಧನೆಗೆ ಮಂಗಳೂರಿನ ಜನತೆ ಮುಂದಾಗಿದ್ದಾರೆ. ಶಾಸ್ತ್ರಬದ್ಧವಾಗಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆಗೆ ಕೊಂಡೊಯ್ಯುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರತಿಷ್ಠಾಪನ ಕಾರ್ಯಕ್ಕೂ ಮುನ್ನ ನಡೆಯಬೇಕಾದ ಧಾರ್ಮಿಕ ವಿಧಿವಿಧಾನಗಳಿಗೂ ಜನ ಶ್ರದ್ಧಾ ಭಕ್ತಿಯೊಂದಿಗೆ ಸಿದ್ಧತೆ ನಡೆಸುತ್ತಿದ್ದಾರೆ.
ಮಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದ ವಿವಿಧ ಕಡೆಗಳಲ್ಲಿ ಗೌಜಿಯಿಂದ ಗಣೇಶ ಹಬ್ಬ ಆಚರಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿ ನಗರದ ಹಲವು ಕಡೆ ತಯಾರಿ ನಡೆಯುತ್ತಿದೆ. ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪನೆಗೆ ಕೆಲವು ಕಡೆಗಳಲ್ಲಿ ಪೆಂಡಾಲ್, ಇನ್ನೂ ಕೆಲವೆಡೆ ಶೀಟ್‌ಗಳನ್ನು ಹಾಕುವ ಕಾರ್ಯ ನಡೆಯುತ್ತಿದೆ.
ಪರಿಸರ ಸ್ನೇಹಿ ಹಬ್ಬಕ್ಕೆ ಸೂಚನೆ
ಗೌರಿ ಗಣೇಶ ಹಬ್ಬ ಸಮೀಪಿಸುತ್ತಿದ್ದು, ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೂ ತಿಳಿಸಿದೆ. ಹಬ್ಬದ ಆಚರಣೆಯಿಂದ ಉಂಟಾಗುವ ಮಾಲಿನ್ಯದಿಂದ ನೈಸರ್ಗಿಕ ಜಲ ಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅಧಿಸೂಚನೆಯನ್ನು ಹೊರಡಿಸಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ಗೌರಿ ಮತ್ತು ಗಣೇಶ ವಿಗ್ರಹಗಳನ್ನು ಯಾವುದೇ ಕೆರೆ, ಬಾವಿ, ಕಟ್ಟೆ ಮತ್ತು ಇತರೆ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ನಿರ್ಬಂಧಿಸಲಾಗಿದೆ.
ರಾಸಾಯನಿಕ ಬಣ್ಣಗಳಿಂದ ಮಾಡಿದ ಮೂರ್ತಿಗಳ ಬದಲಾಗಿ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಹಾಗೂ ನೈಸರ್ಗಿಕ ಬಣ್ಣ ಲೇಪಿತ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿದ ಅನಂತರ ಸಾಮೂಹಿಕವಾಗಿ ಗುರುತಿಸಿರುವ ಸ್ಥಳಗಳಲ್ಲಿ ಕಡ್ಡಾಯವಾಗಿ ವಿಸರ್ಜಿಸಬೇಕು ಎಂಬ ಸೂಚನೆ ನೀಡಲಾಗಿದೆ.
ಕಿನ್ನಿಗೋಳಿ ಸಮೀಪದ ಬಳಕುಂಜೆ, ಕರ್ನಿರೆಯಲ್ಲಿ ಸುಮಾರು 15 ಎಕರೆ ಪ್ರದೇಶದಲ್ಲಿ 54 ಬೆಳೆಗಾರರು ಸುಮಾರು 5ರಿಂದ 8 ಲಕ್ಷಕ್ಕೂ ಮಿಕ್ಕಿ ಬೆಳೆದ ಕಬ್ಬಿಗೆ ಈ ಬಾರಿ ಭಾರೀ ಬೇಡಿಕೆಯಿದ್ದು, ಉತ್ತಮ ಬೆಲೆಯಲ್ಲಿ ಮಾರಾಟವಾಗಿದೆ.
ಬಳಕುಂಜೆಯ ಶಾಂಭವಿ ನದಿ ತಟದ ಹೊಗೆ ಮಿಶ್ರಿತ ಕೆಂಪ್ಪು, ಕಪ್ಪು ಮಣ್ಣು ಇಲ್ಲಿ ಬೆಳೆಯುವ ಕಬ್ಬಿನ ಸವಿಯ ಹೆಚ್ಚಳಕ್ಕೆ ಕಾರಣವಾಗಿದೆ.
‘ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಬೇಡಿಕೆ
ಮಂಗಳೂರು, ಪುತ್ತೂರು, ಉಡುಪಿ, ಬಂಟ್ವಾಳ, ಕಡಬ, ನೆಲ್ಯಾಡಿ, ಕಾರ್ಕಳ ಹೀಗೆ 25ಕ್ಕೂ ಹೆಚ್ಚು ಚರ್ಚ್‌ಗಳಿಗೆ ಬಳಕುಂಜೆಯಿಂದಲೇ ಕಬ್ಬನ್ನು ಪೂರೈಸಲಾಗುತ್ತದೆ. ಇನ್ನೂ ಕೆಲವು ಕಡೆಗಳಿಂದ ಬೇಡಿಕೆ ಬಂದಿದೆ. ಕಬ್ಬು ಕೂಡ ಇಲ್ಲಿನ ವಿಶೇಷ ಬೆಳೆ ಆಗಿದ್ದು, ಇದಕ್ಕೂ ಬೇಡಿಕೆ ಇದೆ. ಭತ್ತದ ಬೆಳೆ ಹಾಗೂ ಕಬ್ಬನ್ನು ಪರ್ಯಾಯ ಬೆಳೆಯಾಗಿ ಬೆಳೆಸುತ್ತೇವೆ. ಈ ವರ್ಷ ಕಬ್ಬು ಬೆಳೆದ ಗದ್ದೆಯಲ್ಲಿ ಮುಂದಿನ ವರ್ಷ ಭತ್ತ ಬೆಳೆಯುತ್ತೇವೆ. ಹಾಗಾಗಿ ಎರಡೂ ಬೆಳೆ ಸಮೃದ್ಧವಾಗಿ ಆಗುತ್ತದೆ ಕಳೆದ ನಲವತ್ತು ವರುಷಗಳಿಂದ ಕಬ್ಬು ಬೆಳೆಯಲಾಗುತ್ತಿದೆ ಎಂದು ಕಬ್ಬು ಬೆಳೆಗಾರರು ಹೇಳುತ್ತಾರೆ.
ನವೆಂಬರ್‌ನಲ್ಲಿ ಬೆಳೆ ಪ್ರಾರಂಭ
ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಬೀಜ ಹಾಕಿ ಬೆಳೆ ಪ್ರಾರಂಭಿಸಿ, ಆಗಸ್ಟ್, ಸೆಪ್ಟಂಬರ್ ಕಟಾವಿನ ತನಕ ಈ ಬೆಳೆಗಾಗಿ ಸಾಕಷ್ಟು ಕಷ್ಟ ಪಡಲಾಗುತ್ತದೆ. ಈಬಾರಿ ಒಂದು ಕಪ್ಪು ಕಬ್ಬಿಗೆ ಸುಮಾರು 35 ರೂ., ಬಿಳಿ ಕಬ್ಬಿಗೆ 38 ರೂ. ಸಿಕ್ಕಿದೆ. 30 ವರ್ಷಗಳಿಂದ ಚೌತಿ ಹಬ್ಬ ಹಾಗೂ ಕಬ್ಬು ಬೆಳೆಯಲಾಗುತ್ತಿದೆ. ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ಕಬ್ಬು ಮಾರಾಟಗಾರರು ಮುಂಗಡವಾಗಿ ಕೊಟ್ಟು ಕಬ್ಬು ಖರೀದಿಸುತ್ತಿದ್ದರು. ಈ ಹಿಂದೆ ಮುಂಬಯಿಗೂ ಕಬ್ಬನ್ನು ಬಸ್‌ನಲ್ಲಿ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿತ್ತು. ಈಗ ಮುಂಬಯಿ ಬಸ್ ಸಂಚಾರ ಕಡಿಮೆ ಆಗಿರುವುದರಿಂದ ಕಳುಹಿಸುವುದು ಕಷ್ಟ ಸಾಧ್ಯ ಆದರೂ ಕಬ್ಬನ್ನು ತುಂಡು ಮಾಡಿ ಗೋಣಿಯಲ್ಲಿ ತುಂಬಿಸಿ ಸಾಗಾಟ ಮಾಡಲಾಗುತ್ತಿದೆ. ವಿದೇಶಕ್ಕೂ ಬೇಡಿಕೆ ಇದೆ ಆದರೆ ಕಳುಹಿಸುವ ವ್ಯವಸ್ಥೆ ಕೈಗೂಡಲಿಲ್ಲ.
-ಎಲಿಯಾಸ್ ಡಿ’ಸೋಜಾ,ಕಬ್ಬು ಬೆಳೆಗಾರರು ಬಳ್ಕುಂಜೆ