Published
5 months agoon
By
Akkare News
ದೆಹಲಿಯಲ್ಲಿ ಕರ್ನಾಟಕದ ಅಲೆಮಾರಿ ಸಮುದಾಯಗಳು ನಡೆಸುತ್ತಿರುವ ಮೀಸಲಾತಿ ಹೋರಾಟದಲ್ಲಿ ಹೊಸ ಭರವಸೆ ಮೂಡಿದ್ದು, ಕಾಂಗ್ರೆಸ್ ಮುಖಂಡರಾದ ಬಿ.ಕೆ.ಹರಿಪ್ರಸಾದ್ ಜೊತೆಗಿನ ಮಾತುಕತೆ ಫಲಪ್ರದವಾಗಿದೆ ಎಂದು ಮೀಸಲಾತಿ ‘ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟ’ ಸಮಿತಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಜಸ್ಟೀಸ್ ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸಿನಂತೆ ಅಲೆಮಾರಿಗಳು ಶೇ. 1 ಪ್ರತ್ಯೇಕ ಮೀಸಲಾತಿ, ಪ್ರತ್ಯೇಕ ಅಭಿವೃದ್ಧಿ ನಿಗಮ ಹಾಗೂ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಲು ಕರ್ನಾಟಕ ಸರ್ಕಾರದಿಂದ ತಾತ್ವಿಕ ಒಪ್ಪಿಗೆ ಸಿಕ್ಕಿದೆ ಎಂದು ತಿಳಿಸಿದ್ದಾರೆ.
“ಪ್ರಕ್ರಿಯೆಯ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲು ದೀಪಾವಳಿ ಮುಗಿದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಮಯ್ಯ, ರಣ್‌ದೀಪ್ ಸುರ್ಜೇವಾಲ, ಬಿ.ಕೆ. ಹರಿಪ್ರಸಾದ್ ಮತ್ತು ಹೆಚ್. ಸಿ ಮಹದೇವಪ್ಪನವರ ಸಮ್ಮುಖದಲ್ಲಿ ಅಲೆಮಾರಿ ಸಮುದಾಯದ ಮುಖಂಡರ ಜೊತೆ ಮಾತುಕತೆ ನಡೆಸಲಾಗುವುದು ಎಂಬ ಭರವಸೆ ಸಿಕ್ಕಿದೆ” ಎಂದು ಸಮಿತಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ 14 ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿದ್ದ ಅಲೆಮಾರಿ ಸಮುದಾಯದ ಹೋರಾಟ ಇಂದು ಪರಿಹಾರದ ಕಡೆ ಮುಖಮಾಡುವ ಹಂತಕ್ಕೆ ಬಂದು ತಲುಪಿದೆ. ಅಕ್ಟೋಬರ್ 2ಕ್ಕೆ ದೆಹಲಿ ತಲುಪಿದ ಅಲೆಮಾರಿ ಸಮುದಾಯದ ಸುಮಾರು 600 ಜನ ಪ್ರತಿನಿಧಿಗಳು ಹಾಗೂ ಕಲಾವಿದರು ದೆಹಲಿಯ ಜಂತರ್ ಮಂತರಿನಲ್ಲಿ ಪ್ರತಿಭಟಿಸಿದ್ದಲ್ಲದೆ, ತಮ್ಮ ಪಾರಂಪರಿಕ ವೇಷಭೂಷಣಗಳಿಂದ ಗಮನ ಸೆಳೆದರು. ಕಾಂಗ್ರೆಸ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದರು.
ಎಐಸಿಸಿ ಪರವಾಗಿ ಅಲೆಮಾರಿ ನಿಯೋಗವನ್ನು ಭೇಟಿ ಮಾಡಿದ್ದ ಅಭಿಷೇಕ್ ದತ್ತ ಅವರು ರಾಹುಲ್ ಗಾಂಧಿ ಅವರು ದೇಶದಲ್ಲಿಲ್ಲ, ರಾಷ್ಟ್ರಾಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಆಸ್ಪತ್ರೆಯಲ್ಲಿದ್ದಾರೆ. ಕರ್ನಾಟಕದ ಅಲೆಮಾರಿಗಳ ಈ ಸಮಸ್ಯೆಯನ್ನು ನಾವು ಅವರ ಗಮನಕ್ಕೆ ತರುತ್ತೇವೆ. ನೀವು ಕರ್ನಾಟಕಕ್ಕೆ ವಾಪಸ್ ಹೊರಡಿ ಎಂದು ಕೇಳಿಕೊಂಡಿದ್ದರು. ಆದರೆ, ಅಂದು ಸಂಜೆ ಅಂಬೇಡ್ಕರ್ ಭವನದಲ್ಲಿ ನಡೆದ ಅಲೆಮಾರಿ ಸಮುದಾಯದ 59 ಜನಜಾತಿಗಳ ಸಭೆ ಈ ಕುರಿತು ʼಸರ್ಕಾರದ ಕಡೆಯಿಂದ ಸ್ಪಷ್ಟ ತೀರ್ಮಾನ ಹೊರಬರುವ ತನಕ ದೆಹಲಿ ಬಿಡುವ ಮಾತೇ ಇಲ್ಲʼ ಎಂದು ತೀರ್ಮಾನ ತೆಗೆದುಕೊಂಡಿತ್ತು. ಅಂದಿನಿಂದ ದಿ: 15.10.2025 ರವರೆಗೆ ಅಲೆಮಾರಿ ಪ್ರತಿನಿಧಿಗಳ ತಂಡವು ಎಐಸಿಸಿ ಕಚೇರಿಯ ಆವರಣದಲ್ಲಿ ನಿರಂತರ ಧರಣಿ ಸತ್ಯಾಗ್ರವನನ್ನು ಮುಂದುವರೆಸಿತ್ತು. ಕಾಂಗ್ರೆಸ್ ಹೈಕಮಾಂಡ್‌ನ ಅನೇಕ ಮುಖಂಡರುಗಳನ್ನು ಕಂಡು ಅಲೆಮಾರಿ ಸಮುದಾಯಗಳ ಸಮಸ್ಯೆಗಳನ್ನು ಮನವರಿಕೆ ಮಾಡಿಸುವ ಪ್ರಯತ್ನ ನಡೆಸಿತ್ತು.