Published
2 months agoon
By
Akkare News
ದಕ್ಷಿಣ ಕನ್ನಡ (ಜ.10): ಕರ್ನಾಟಕದ ಕರಾವಳಿ ಭಾಗವನ್ನು ಕೇರಳ ಮತ್ತು ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮ ಹಬ್ ಆಗಿ ಪರಿವರ್ತಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತ ಸಭೆಯ ನಂತರ ಮಾತನಾಡಿದ ಅವರು, ಈ ಭಾಗದ ನೈಸರ್ಗಿಕ ಸಂಪತ್ತನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಈ ಹಿಂದಿನ ಸರ್ಕಾರಗಳು ಹಾಗೂ ಪ್ರಸ್ತುತ ಸರ್ಕಾರ ಕೂಡ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡರು.
ಹೊಸ ಪ್ರವಾಸೋದ್ಯಮ ನೀತಿ (Tourism Policy):
ಕರಾವಳಿ ಭಾಗದ ಅಭಿವೃದ್ಧಿಗಾಗಿಯೇ ಪ್ರತ್ಯೇಕ ಪ್ರವಾಸೋದ್ಯಮ ನೀತಿಯನ್ನು ರೂಪಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈ ಬಗ್ಗೆ ಅಧಿಕಾರಿಗಳು, ಉದ್ಯಮಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ‘ಇಲ್ಲಿನ ಶಾಸಕರು ಕೂಡ ಪಕ್ಷಭೇದ ಮರೆತು ಅಭಿವೃದ್ಧಿಗೆ ಆಸಕ್ತಿ ತೋರಿದ್ದಾರೆ. ಪ್ರವಾಸೋದ್ಯಮ ಬೆಳೆಯಬೇಕಾದರೆ ಮೂಲಸೌಕರ್ಯ ಮುಖ್ಯ. ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಫೈವ್ ಸ್ಟಾರ್ ಹೋಟೆಲ್‌ಗಳ ಕೊರತೆಯಿದೆ, ಅದನ್ನು ನೀಗಿಸಲು ಖಾಸಗಿ ಸಹಭಾಗಿತ್ವದ (PPP) ಅಗತ್ಯವಿದೆ ಎಂದು ಹೇಳಿದರು.
ಸಮಸ್ಯೆಗಳ ಪರಿಹಾರಕ್ಕೆ ಕ್ರಮ:
ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಅಡ್ಡಿಯಾಗಿರುವ ಸಿ.ಆರ್.ಜೆಡ್ ನಿಯಮಗಳು, ರಕ್ಷಣೆ ಮತ್ತು ಕೋಸ್ಟಲ್ ಪೊಲೀಸ್ ಇಲಾಖೆಗಳಿಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆಯಲಾಗಿದೆ. ಉದ್ಯಮಿಗಳು ಮತ್ತು ಸಾರ್ವಜನಿಕರು ತಮ್ಮ ಸಲಹೆಗಳನ್ನು ನೀಡಬಹುದು. ಸರ್ಕಾರವು ಹೂಡಿಕೆದಾರರಿಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಡಿಸಿಎಂ ಭರವಸೆ ನೀಡಿದರು.