Published
2 hours agoon
By
Akkare News
ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಗಾರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಾಲಿವುಡ್ ಸ್ಟಾರ್ ನಟ ಅರ್ಜುನ್ ಕಪೂರ್ ಭೇಟಿ ನೀಡಿದ್ದಾರೆ. ಕಳೆದ ಮೂರು ದಿನಗಳಿಂದ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿದ್ದ ಅವರು, ವಿವಿಧ ವಿಶೇಷ ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.
ಶನಿವಾರವೇ ಕ್ಷೇತ್ರಕ್ಕೆ ಆಗಮಿಸಿದ್ದ ಅರ್ಜುನ್ ಕಪೂರ್, ಭಾನುವಾರ ಅತ್ಯಂತ ಫಲದಾಯಕವೆಂದು ನಂಬಲಾದ ‘ಸರ್ಪ ಸಂಸ್ಕಾರ’ ಸೇವೆಯನ್ನು ನೆರವೇರಿಸಿದರು. ಸೋಮವಾರ ಬೆಳಿಗ್ಗೆ ನಡೆದ ‘ಆಶ್ಲೇಷ ಬಲಿ’ ಪೂಜೆಯಲ್ಲೂ ಭಾಗಿಯಾಗಿ ಪುನೀತರಾದರು. ವೈಯಕ್ತಿಕ ಕಾರಣಗಳು ಹಾಗೂ ಶೀಘ್ರ ವಿವಾಹ ಯೋಗಕ್ಕಾಗಿ (ಕಂಕಣ ಭಾಗ್ಯ) ಅವರು ಈ ವಿಶೇಷ ಸೇವೆಗಳನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೂಜಾ ಕಾರ್ಯಕ್ರಮಗಳ ನಂತರ ಅರ್ಜುನ್ ಕಪೂರ್ ದೇವಾಲಯದ ಆಡಳಿತ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರು ನಟರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಈ ವೇಳೆ ದೇವಾಲಯದ ಪಿಆರ್‌ಒ ಜಯರಾಮ್ ರಾವ್, ಮನ್ಮಥ ಬಟ್ಟೋಡಿ ಹಾಗೂ ಇತರ ಸಿಬ್ಬಂದಿ ಉಪಸ್ಥಿತರಿದ್ದರು.