Published
2 months agoon
By
Akkare News
ಪುತ್ತೂರು, ಜೂ.15: ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಬಿಲ್ಲವ ಸಮಾಜ ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದಿಂದ ಪುತ್ತೂರಿನಲ್ಲಿ ಬಿಲ್ಲವ ಬ್ರಿಗೇಡ್ ಎಂಬ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ವಿವಿಧ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಜತೆಗೆ ಸಮಾಜ ವಿರೋಧಿ ಕೆಲಸಗಳ ವಿರುದ್ಧ ಹೋರಾಟ ನಡೆಸುವುದು ಬಿಲ್ಲವ ಬ್ರಿಗೇಡ್‌ನ ಪ್ರಮುಖ ಉದ್ದೇಶವಾಗಿದೆ. ಮಂಗಳೂರಿನಲ್ಲಿ ಹಲವಾರು ಸೇವಾ ಕಾರ್ಯ ಚಟುವಟಿಕೆಗಳ ಮೂಲಕ ಮನೆ ಮಾತಾಗಿರುವ ಸದಾನಂದ ಪೂಜಾರಿ ಯವರ ನೇತೃತ್ವದ ಮಂಗಳೂರು ಬಿಲ್ಲವ ಬ್ರಿಗೇಡ್(ರಿ.)ನೊಂದಿಗೆ ಸಂಯೋಜಿತವಾಗಿ ಪುತ್ತೂರು ಬಿಲ್ಲವ ಬ್ರಿಗೇಡ್ ಪಕ್ಷಾತೀತವಾಗಿ ಕಾರ್ಯ ನಿರ್ವಹಿಸಲಿದೆ. ಈಗಾಗಲೇ ನಿಯೋಜಿತ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ಸದಸ್ಯರನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಅಧಿಕೃತವಾಗಿ ನಮ್ಮ ಪುತ್ತೂರಿನ ಬಿಲ್ಲವ ಬ್ರಿಗೇಡ್ ಕಾರ್ಯಾಚರಿಸಲಿದೆ.ಉಪ್ಪಿನಂಗಡಿಯ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಉಬಾರ್ ಮಂಜ ಬೈದ್ಯರ ಪುತ್ಥಳಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬಿಲ್ಲವ ಬ್ರಿಗೇಡ್ ಪದಾಧಿಕಾರಿಗಳು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಸಲ್ಲಿಸಿದರು.
ಶಾಸಕರ ಕಚೇರಿಯಲ್ಲಿ ನಡೆದ ಈ ಸಂದರ್ಭದಲ್ಲಿ ಬಿಲ್ಲವ ಬ್ರಿಗೇಡ್ ಪ್ರತಿನಿಧಿಗಳು ಉಬಾರ್ ಮಂಜ ಬೈದ್ಯರ ಇತಿಹಾಸ, ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ ಹಾಗೂ ಇಂದಿನ ಪೀಳಿಗೆಗೆ ಅವರ ತ್ಯಾಗದ ಸಂದೇಶವನ್ನು ತಲುಪಿಸುವ ಅಗತ್ಯತೆಯನ್ನು ವಿವರಿಸಿದರು. ಉಪ್ಪಿನಂಗಡಿಯಲ್ಲಿ ಅವರ ಪುತ್ಥಳಿ ನಿರ್ಮಾಣ ಮಾಡುವ ಮೂಲಕ ಈ ಭಾಗದ ಇತಿಹಾಸವನ್ನು ಉಳಿಸಿ ಬೆಳೆಸಬೇಕೆಂದು ಒತ್ತಾಯಿಸಿದರು.