Published
7 months agoon
By
Akkare News
ಪುತ್ತೂರು :ಏಳು ವರ್ಷದ ಹಿಂದೆ ಮೈಂದನಡ್ಕದ ಬಾಡಿಗೆ ಮನೆಯಲ್ಲಿದ್ದ ಗದಗ ಜಿಲ್ಲೆಯ ರೋಣ ತಾಲೂಕಿನ ರಾಜೂರ ದಿಂಡೂರ ನಿವಾಸಿ ಪೀರೇಶ್ ಪೀರಪ್ಪ ಸಂಗಪ್ಪ ಮಾಲೋತ್ತರ ಎಂಬಾತನಿಗೆ ಪೋಕ್ಸೋ ಪ್ರಕರಣದಲ್ಲಿ ಜೈಲು ಶಿಕ್ಷೆ ವಿಧಿಸಿ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
2017ರ ಆಗಸ್ಟ್‌ನಲ್ಲಿ ಬಾಲಕಿಯು ಮೊಬೈಲ್ ಚಾರ್ಜ್ ಮಾಡಲೆಂದು ಮೈಂದನಡ್ಕ ಹೊಟೇಲ್‌ಗೆ ಬಂದಿದ್ದಳು. ಆದರೆ ಅಲ್ಲಿ ವಿದ್ಯುತ್ ಇರದಿದ್ದ ಕಾರಣ ಮರಳಿ ಹೊರಟಿದ್ದಳು. ಆಗ ಪೀರೇಶನು ತಾನು ಇರುವ ಬಾಡಿಗೆ ಮನೆಯಲ್ಲಿ ವಿದ್ಯುತ್ ಸಂಪರ್ಕವಿದೆ ಎಂದು ನಂಬಿಸಿ ಆಕೆಯನ್ನು ಪುಸಲಾಯಿಸಿ ಕರೆದೊಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಬಳಿಕ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿ ಆಕೆ ಗರ್ಭಿಣಿಯಾಗಲು ಕಾರಣನಾಗಿದ್ದ. ಬಾಲಕಿಯ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯ ಪ್ರಕರಣದಲ್ಲಿ ಒಟ್ಟು 18 ಸಾಕ್ಷಿಗಳನ್ನು ವಿಚಾರಿಸಿದೆ. ನ್ಯಾಯಾಧೀಶೆ ಸರಿತಾ ಡಿ. ಆರೋಪಿಗೆ ಭಾ.ದಂ.ಸಂ. ಕಲಂ 376ರಡಿ ಅಪರಾಧಕ್ಕೆ 10 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ಮತ್ತು 20 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 1 ವರ್ಷ ಸಾದಾ ಶಿಕ್ಷೆ ಮತ್ತು ಭಾ.ದಂ.ಸಂ. ಕಲಂ 506ರಡಿ ಅಪರಾಧಕ್ಕೆ 2 ವರ್ಷಗಳ ಸಾದಾ ಶಿಕ್ಷೆ ಮತ್ತು 5 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಶಿಕ್ಷೆ ಮತ್ತು ಪೋಕ್ಸೋ ಕಾಯ್ದೆಯಡಿ ಅಪರಾಧಕ್ಕೆ 10 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ಮತ್ತು ರೂ. 10 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ 1 ವರ್ಷ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ. ದಂಡ ಪ್ರಕ್ರಿಯ ಸಂಹಿತೆ ಕಲಂ 357ಎ ಯಲ್ಲಿ ಬಾಲಕಿಗೆ 6 ಲಕ್ಷ ರೂ. ಪರಿಹಾರ ರೂಪವಾಗಿ ನೀಡಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಆದೇಶಿಸಿದೆ.