Published
6 months agoon
By
Akkare News
ಕಟೀಲು: ಅಕ್ಟೋಬರ್ 1. 2025 ರಿಂದ ಜಾರಿಗೆ ಬರುವಂತೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸೇವಾ ದರಗಳನ್ನು ಪರಿಷ್ಕರಿಸಲಾಗಿದೆ. ಈ ದರ ಪರಿಷ್ಕರಣೆಯಲ್ಲಿ ರಾಜ್ಯ ಸರ್ಕಾರ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯಾವುದೇ ಪಾತ್ರವಿಲ್ಲ ಎಂದು ದೇವಸ್ಥಾನದ ಅನುವಂಶಿಕ ಅರ್ಚಕ ಹಾಗೂ ಮೊಕೇಸರ ವಾಸುದೇವ ಅಸ್ರಣ್ಣ ಅವರ ಸಹೋದರ ಹರಿನಾರಾಯಣ ದಾಸ ಅಸ್ರಣ್ಣ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಸುದ್ದಿಗಳನ್ನು ಅವರು ‘ಸಂಪೂರ್ಣ ಸುಳ್ಳು’ ಎಂದು ತಳ್ಳಿಹಾಕಿದ್ದಾರೆ.
ಕಟೀಲು ದೇವಸ್ಥಾನದ ಸೇವಾ ದರ ಪರಿಷ್ಕರಣೆಯು ಸ್ಥಳೀಯ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ದೇವಸ್ಥಾನದ ಆಡಳಿತ ಮಂಡಳಿಯಿಂದಲೇ ನಡೆದಿದೆ. ರಾಜ್ಯ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳಿಗೆ ದೇವಸ್ಥಾನದ ಹಣವನ್ನು ಬಳಸಲಾಗುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾದುದು ಎಂದು ಹರಿನಾರಾಯಣ ದಾಸ ಅಸ್ರಣ್ಣ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಹರಿನಾರಾಯಣ ದಾಸ ಅಸ್ರಣ್ಯ. “ದೇವಸ್ಥಾನ ಮತ್ತು ಸರ್ಕಾರದ ವಿರುದ್ಧ ಮಸಿ ಬಳಿಯುವ ಉದ್ದೇಶದಿಂದ ಕಿಡಿಗೇಡಿಗಳು ಈ ಸುಳ್ಳು ಪ್ರಚಾರವನ್ನು ನಡೆಸುತ್ತಿದ್ದಾರೆ.” ಎಂದು ಆರೋಪಿಸಿದರು. “ಸೇವಾ ದರಗಳನ್ನು ದೇವಸ್ಥಾನದ ಆಡಳಿತ ಮಂಡಳಿಯೇ ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಪರಿಷ್ಕರಿಸಿದೆ. ಇದರಲ್ಲಿ ಯಾವುದೇ ಬಾಹ್ಯ ಹಸ್ತಕ್ಷೇಪವಿಲ್ಲ. ಆದರೂ. ಮುಖ್ಯಮಂತ್ರಿಯವರ ಹೆಸರನ್ನು ತಪ್ಪಾಗಿ ಬಳಸಿ ಅಪಪ್ರಚಾರ ನಡೆಸಲಾಗುತ್ತಿದೆ.” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.