Connect with us

ಇತರ

ಪುತ್ತೂರು ಕೋರ್ಟ್‌ ಕಟ್ಟಡ ಸಿದ್ಧ; ಹಳೆ ಕಟ್ಟಡಗಳಿಂದ ಶೀಘ್ರ ಮುಕ್ತಿ

Published

on

ಪುತ್ತೂರು: ಉಪ್ಪಿನಂಗಡಿ ರಸ್ತೆಯಲ್ಲಿ ನಗರದಿಂದ ಆರು ಕಿ.ಮೀ. ದೂರದಲ್ಲಿರುವ ಆನೆಮಜಲಿನಲ್ಲಿ 51 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ನ್ಯಾಯಾಲಯದ ಕಟ್ಟಡವು ಜನವರಿ ಅಂತ್ಯದಲ್ಲಿ ಉದ್ಘಾಟನೆಗೆ ಸಿದ್ಧವಾಗಿದೆ.

ಅಂದ ಹಾಗೆ, ಪುತ್ತೂರಿನ ನ್ಯಾಯಾಲಯಗಳಿಗೆ ಬರೋಬ್ಬರಿ 150ಕ್ಕಿಂತ ಅಧಿಕ ವರ್ಷಗಳ ಇತಿಹಾಸ ಇದೆ ಎನ್ನುತ್ತಿದೆ ದಾಖಲೆ ಗಳು!
ನೂತನ ನ್ಯಾಯಾಲಯದ ಉದ್ಘಾಟನೆಯ ಹೊತ್ತಲ್ಲೇ ಹಳೆಯ ನ್ಯಾಯಾಲಯ ಆರಂಭವಾದ ಕಾಲಘಟ್ಟ, ಅನಂತರ ಹಂತ ಹಂತವಾಗಿ ನ್ಯಾಯಾಲಯ ಬೆಳೆದ ಬಂದ ಬಗೆ ಪುತ್ತೂರಿನ ಮಟ್ಟಿಗೆ ಮೈಲಿಗಲ್ಲು ಆಗಿದೆ. ಶತಮಾನದ ನೆನಪಿನೊಂದಿಗೆ ನ್ಯಾಯಾಲಯಗಳು ಹೊಸ ಕಟ್ಟಡ ಪ್ರವೇಶಕ್ಕೆ ಸಿದ್ಧವಾಗಿದೆ.

1860ರ ದಾಖಲೆ ಪತ್ರ!
ಪುತ್ತೂರಿನಲ್ಲಿ ಕೋರ್ಟ್‌ ಇದ್ದ ಬಗ್ಗೆ ಪ್ರಥಮವಾಗಿ ಉಲ್ಲೇಖೀಸಲ್ಪಟ್ಟಿರುವುದು 1860ರಲ್ಲಿ ನೋಂದಣಿಗೊಂಡ ದಸ್ತಾವೇಜಿನಲ್ಲಿ. ಆ ದಸ್ತಾವೇಜಿನಲ್ಲಿ ಆಸ್ತಿಯ ಗಡಿಗಳನ್ನು ಉಲ್ಲೇಖೀಸುವಾಗ ಒಂದು ಗಡಿಯು ಮುನ್ಸಿಫ್‌ ಕೋರ್ಟಿಗೆ ಹೋಗುವ ರಸ್ತೆ ಎಂದು ನಮೂದಾಗಿದೆ. ಈ ರಸ್ತೆ ಹಳೆ ಅಂಚೆ ಕಚೇರಿ ಬಳಿಯಿಂದ ಅರಣ್ಯ ಇಲಾಖೆ ಕಚೇರಿಗೆ ಹೋಗುವ ರಸ್ತೆಗೆ ಸಂಬಂಧಿಸಿದ್ದಾಗಿದೆ. ಇದರ ಆಧಾರದಲ್ಲಿ ಮುನ್ಸಿಫ್‌ ಕೋರ್ಟ್‌ ಮತ್ತು ಅದರ ಕಚೇರಿ ನೆಲ್ಲಿಕಟ್ಟೆಯ ಈಗಿನ ಅರಣ್ಯ ಕಚೇರಿ ಇರುವ ಪ್ರದೇಶದಲ್ಲಿ ಇತ್ತು ಎನ್ನುವುದು ಪುಷ್ಟೀಕರಿಸುತ್ತದೆ ಎನ್ನುತ್ತದೆ ಇತಿಹಾಸ. ಈ ಆಧಾರದಲ್ಲಿ ಪುತ್ತೂರು ನ್ಯಾಯಾಲಯಕ್ಕೆ ಸರಿ ಸುಮಾರು 150ಕ್ಕೂ ಅಧಿಕ ವರ್ಷದ ಇತಿಹಾಸ ಇರುವುದು ಖಚಿತವಾಗಿದೆ.

100 ವರ್ಷದ ಕಟ್ಟಡ
ಈಗ ನ್ಯಾಯಾಲಯ ಇರುವ ಪ್ರದೇಶದಲ್ಲಿ 1880ರಲ್ಲಿ ಗೋಪುರ ಇರುವ ಕೋರ್ಟ್‌ ಕಟ್ಟಡ ನಿರ್ಮಾಣವಾಗಿತ್ತು. ಅದರಲ್ಲಿ ಪುತ್ತೂರು ಡಿಸ್ಟ್ರಿಕ್ಟ್ ಮುನ್ಸಿಫ್‌ ಕೋರ್ಟ್‌ ಕಾರ್ಯ ಆರಂಭಿಸಿತ್ತು. 111 ವರ್ಷಗಳ ಆ ಕಟ್ಟಡವು 1989 ಆ. 26 ರಂದು ಕುಸಿದು ಬೀಳುತ್ತದೆ. ಅನಂತರ ಅದೇ ಕಟ್ಟಡದ ಉಳಿದ ಭಾಗದಲ್ಲಿ ಎರಡು ವರ್ಷಗಳ ಕಾಲ ಕೋರ್ಟ್‌ ಕಲಾಪ ನಡೆಯುತ್ತದೆ. 1991ರಿಂದ ಹೊಸ ಕಟ್ಟಡ ರಚನೆ ಆಗುವ ತನಕ ನ್ಯಾಯಾಲಯದ ಕಲಾಪಗಳು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಮೀಪದ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿತ್ತು. ಈಗಿರುವ ಕಟ್ಟಡವೂ 1996 ರಲ್ಲಿ ಉದ್ಘಾಟನೆಗೊಂಡು ಆರು ನ್ಯಾಯಾಲಯಗಳು ಇಲ್ಲೇ ಕಾರ್ಯಾಚರಿಸುತ್ತಿವೆ.

ಆರು ವರ್ಷಗಳಿಂದ ನಿರ್ಮಾಣ
-51 ಕೋಟಿ ರೂ.ವೆಚ್ಚದಲ್ಲಿ ಆನೆಮಜಲಿನಲ್ಲಿ ನಿರ್ಮಾಣಗೊಳ್ಳುತ್ತಿರುವ ನಾಲ್ಕು ಮಹಡಿಯ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಉದ್ಘಾಟನೆಗೆ ಸಿದ್ಧವಾಗಿದೆ.
-ಎರಡು ಹಂತದಲ್ಲಿ ನಡೆದ ಕಾಮಗಾರಿಯ ಪೈಕಿ ಕೊನೆಯ ಹಂತದ ಕಾಮಗಾರಿ ಲೋಕೋಪಯೋಗಿ ಇಲಾಖೆಯ ಉಸ್ತುವಾರಿಯಲ್ಲಿ ನಡೆದಿದೆ. 2018ರ ನ. 10ರಂದು ಮೊದಲ ಹಂತದ 25 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು.
-ಟೆಂಡರ್‌ ವಿಳಂಬವಾದ ಕಾರಣ ಕಾಮಗಾರಿ ಪ್ರಾರಂಭ ಪ್ರಕ್ರಿಯೆ ತಡವಾಗಿ ಕರಾರಿನ ಪ್ರಕಾರ 2019ರ ಮೇ 11ರಂದು ಪ್ರಾರಂಭಗೊಂಡಿತ್ತು. ಎರಡು ವರ್ಷ ಕಾಮಗಾರಿ ನಡೆದು 2021ರಲ್ಲಿ ಪೂರ್ಣಗೊಂಡಿತ್ತು.
– ಮೊದಲ ಹಂತದಲ್ಲಿ ನ್ಯಾಯಾಲಯ ಕಟ್ಟಡದ ಮೊದಲ ಎರಡು ಅಂತಸ್ತು ಹಾಗೂ ವಕೀಲರ ಸಂಘ, ಜಿಲ್ಲಾ ನ್ಯಾಯಾಂಗ ಇಲಾಖೆಯ ಸಹಭಾಗಿತ್ವದಲ್ಲಿ 3 ಕೋಟಿ ರೂ.ವೆಚ್ಚದಲ್ಲಿ ನ್ಯಾಯಾಲಯ ಕಟ್ಟಡದ ಪಕ್ಕದಲ್ಲೇ ನಾಲ್ಕು ಅಂತಸ್ತಿನ ವಕೀಲರ ಸಂಘದ ಕಚೇರಿ ಕಟ್ಟಡ ನಿರ್ಮಿಸಲಾಯಿತು.

2021 ಡಿಸೆಂಬರ್‌ನಲ್ಲಿ ಸುಪ್ರಿಂ ಕೋರ್ಟ್‌ ನ್ಯಾಯಮೂರ್ತಿ ಅಬ್ದುಲ್‌ ನಜೀರ್‌ ಅವರು ಪ್ರಥಮ ಹಂತದ ಕಾಮಗಾರಿ, ವಕೀಲರ ಭವನ ಉದ್ಘಾಟನೆ ಹಾಗೂ 2ನೇ ಹಂತದ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.
– 2021ರಲ್ಲಿ ಒಟ್ಟು 4 ಮಹಡಿಯ ನ್ಯಾಯಾಲಯ ಸಂಕೀರ್ಣದ ಉಳಿದ ಎರಡು ಅಂತಸ್ತು ಹಾಗೂ ನ್ಯಾಯಾಧೀಶರ ವಸತಿಗೃಹಗಳ ನಿರ್ಮಾಣದ 26 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಾರಂಭಿಸಲಾಯಿತು. ಸುಸಜ್ಜಿತ ಸಂಪರ್ಕ ರಸ್ತೆ ನಿರ್ಮಾಣಕ್ಕೂ ಚಾಲನೆ ನೀಡಲಾಯಿತು.

6 ನ್ಯಾಯಾಲಯ ತನಕ ವಿಸ್ತರಣೆ
ಒಂದುವರೆ ಶತಮಾನದ ಹಿಂದೆ ಡಿಸ್ಟ್ರಿಕ್ಟ್ ಮುನ್ಸಿಫ್‌ ಕೋರ್ಟ್‌ ಆರಂಭಗೊಂಡಿತ್ತು. ಆ ಕಾಲದ ಪೀಠೊಪಕರಣಗಳಲ್ಲಿ ಡಿಎಂಸಿ ಎಂದು ಬರೆದಿರುವುದು ಕಂಡು ಬರುತ್ತಿದೆ. ಡಿಸ್ಟ್ರಿಕ್ಟ್ ಮುನ್ಸಿಫ್‌ ಕೋರ್ಟ್‌ ಎಂಬ ಹೆಸರಿದ್ದ ಕೋರ್ಟ್‌ ಈಗ ಪ್ರಧಾನ ಸಿವಿಲ್‌ ಜಡ್ಜ್ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯದ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಾದಂತೆ ನ್ಯಾಯಾಲಯಗಳ ಸಂಖ್ಯೆಯು ಏರಿಕೆ ಕಂಡಿದೆ. ಪ್ರಸ್ತುತ 6 ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ.

ಜ. 31ಕ್ಕೆ ಉದ್ಘಾಟನೆ
ಸುಮಾರು 51 ಕೋಟಿ ರೂ.ವೆಚ್ಚದಲ್ಲಿ ನ್ಯಾಯಾಲಯದ ಕಟ್ಟಡ ನಿರ್ಮಾಣಗೊಂಡಿದೆ. ಮೊದಲಾದ ಕಾಮಗಾರಿಯ ಜತೆಗೆ ಇದಲ್ಲದೆ 3 ಕೋಟಿ ರೂ. ವೆಚ್ಚದಲ್ಲಿ ವಕೀಲರ ಭವನ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿದೆ. ಎರಡನೇ ಹಂತದ ಕಾಮಗಾರಿ ಪೂರ್ಣಗೊಂಡಿದ್ದು ಇದೇ ಜ. 31ಕ್ಕೆ ಉದ್ಘಾಟನೆಗೊಳ್ಳಲಿದೆ.

ಅಶೋಕ್‌ ಕುಮಾರ್‌ರೈ,ಶಾಸಕ, ಪುತ್ತೂರು

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version