Connect with us

ಇತರ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ಗೆ ‘ಸಂಘಟನಾ ಸೃಜನ್ ಅಭಿಯಾನ’: ನೂತನ ಅಧ್ಯಕ್ಷರ ಆಯ್ಕೆಗೆ ವೀಕ್ಷಕರ ನೇಮಕ

Published

on

ಮಂಗಳೂರು(ದಕ್ಷಿಣ ಕನ್ನಡ): ಅಖಿಲ ಭಾರತ ಕಾಂಗ್ರೆಸ್ ಸಮಿತಿ ನಿರ್ದೇಶನದಂತೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಸಂಘಟನೆಯನ್ನು ಬಲಪಡಿಸಲು ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲು ಎಐಸಿಸಿಯಿಂದ ವಿಶೇಷ ವೀಕ್ಷಕರನ್ನು ನೇಮಕ ಮಾಡಲಾಗಿದ್ದು, ನಾಳೆಯಿಂದ ಆಗಸ್ಟ್​ 12 ರವರೆಗೆ ಅವರು ಜಿಲ್ಲೆಯಲ್ಲಿ ಇರಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.

ಸೋಮವಾರ ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಪ್ರಕ್ರಿಯೆಯನ್ನು ‘ಸಂಘಟನಾ ಸೃಜನ್ ಅಭಿಯಾನ’ ಎಂಬ ಹೆಸರಿನಡಿ ಹಮ್ಮಿಕೊಳ್ಳಲಾಗಿದೆ. ಎಐಸಿಸಿ ವೀಕ್ಷಕರಾಗಿ ಕೋಝಿಕ್ಕೋಡ್ ಶಾಸಕ ಜಯಂತ್ ಹಾಗೂ ಅವರೊಂದಿಗೆ ರಾಜ್ಯ ಪ್ರತಿನಿಧಿಗಳಾಗಿ ಉಡುಪಿಯ ಮಾಜಿ ಸಂಸದ ಮತ್ತು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಮಹಿಳಾ ಕಾಂಗ್ರೆಸ್ಸಿನ ವೆರೋನಿಕಾ ಕರ್ನೆಲಿಯೋ, ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಮತ್ತು ಶ್ರೀನಿವಾಸ್ ಅವರನ್ನು ನೇಮಿಸಲಾಗಿದೆ ಎಂದರು. ಮಂಗಳವಾರ ಬೆಳಗ್ಗೆ 10 ಗಂಟೆಗೆ ಎಐಸಿಸಿ ವೀಕ್ಷಕರು ಮಂಗಳೂರಿನ ಮಲ್ಲಿಕಟ್ಟೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಲಿದ್ದು, 11:30ಕ್ಕೆ ಜಿಲ್ಲಾ ಕಾಂಗ್ರೆಸ್‌ನ ಸರ್ವ ಸದಸ್ಯರ ಸಭೆ ನಡೆಯಲಿದೆ. ಮಧ್ಯಾಹ್ನದ ನಂತರ ಜಿಲ್ಲೆಯ ಜನಪ್ರತಿನಿಧಿಗಳು, ಶಾಸಕರು, ಮಾಜಿ ಶಾಸಕರು, ಬ್ಲಾಕ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ವೀಕ್ಷಕರ ತಂಡ ಮುಖಾಮುಖಿ ಭೇಟಿಯಾಗಲಿದೆ. ತದನಂತರ ಬುಧವಾರದಿಂದ ಆಯಾ ಬ್ಲಾಕ್‌ಗಳಿಗೆ ಭೇಟಿ ನೀಡಿ, ಕಾರ್ಯಕರ್ತರು ಮತ್ತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿರುವವರು ಎಐಸಿಸಿ ನೀಡಿರುವ ನಿಗದಿತ ಫಾರ್ಮ್ಯಾಟ್‌ನಲ್ಲಿ ತಮ್ಮ ಪೂರ್ವಾಪರ ಮತ್ತು ಅನುಭವದ ವಿವರಗಳೊಂದಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸ್ಥಳೀಯ ನಾಯಕರು, ಸಮಾಜದ ಹಿರಿಯರು ಮತ್ತು ಕಾರ್ಯಕರ್ತರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ, ವೀಕ್ಷಕರ ತಂಡವು ಪ್ರತಿ ಜಿಲ್ಲೆಯಿಂದ ಸೂಕ್ತವಾದ 3 ರಿಂದ 6 ಹೆಸರುಗಳ ಪಟ್ಟಿಯನ್ನು ಸಿದ್ಧಪಡಿಸಿ ಎಐಸಿಸಿಗೆ ಸಲ್ಲಿಸಲಿದೆ. ನಂತರ ಕೆಪಿಸಿಸಿ, ಹೈಕಮಾಂಡ್ ಹಾಗೂ ರಾಜ್ಯ ನಾಯಕರೊಂದಿಗೆ ಸಮಾಲೋಚಿಸಿ ಮುಂದಿನ ನೂತನ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು. ಈ ಹಿಂದೆ ಬ್ಲಾಕ್ ಮಟ್ಟದಲ್ಲಿ ಚುನಾವಣೆಗಳ ಮೂಲಕ ಆಯ್ಕೆ ನಡೆಸಲಾಗುತ್ತಿತ್ತು. ಆದರೆ ಅದರಲ್ಲಿ ಕೆಲವು ಗೊಂದಲಗಳು ಹಾಗೂ ಗುಂಪುಗಾರಿಕೆಗೆ ಅವಕಾಶವಾಗುತ್ತಿದ್ದುದರಿಂದ, ಈ ಬಾರಿ ತಳಮಟ್ಟದ ಎಲ್ಲ ಕಾರ್ಯಕರ್ತರ ಅಭಿಪ್ರಾಯ ಪಡೆದು, ಒಮ್ಮತದ ಸೂಕ್ತ ಅಭ್ಯರ್ಥಿಯನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಪ್ರಕ್ರಿಯೆಗೆ ಎಐಸಿಸಿ ಮುಂದಾಗಿದೆ ಎಂದು ತಿಳಿಸಿದರು.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version