Published
20 hours agoon
By
Akkare News
ಹೌದು, ಕೇವಲ 14 ವರ್ಷದ ಭಾರತೀಯ ಮೂಲದ ಬಾಲಕ ಸಿದ್ಧಾರ್ಥ್ ನಂದ್ಯಾಲ ಕೃತಕ ಬುದ್ಧಿಮತ್ತೆ ಅಂದರೆ ಎಐ ಬಳಸಿಕೊಂಡು ಹೃದಯದ ಸಮಸ್ಯೆಗಳನ್ನ ಅತ್ಯಂತ ವೇಗವಾಗಿ ಪತ್ತೆಹಚ್ಚುವ ಅದ್ಭುತ ಆ್ಯಪ್ ಒಂದನ್ನ ಅಭಿವೃದ್ಧಿಪಡಿಸುವ ಮೂಲಕ ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾನೆ.
ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪ್ರೇರಣೆ ಹೈದರಾಬಾದ್ನಲ್ಲಿ ಜನಿಸಿ, ಅಮೆರಿಕದಲ್ಲಿ ಬೆಳೆದ ಸಿದ್ಧಾರ್ಥ್ ನಂದ್ಯಾಲಗೆ ಬಾಲ್ಯದಿಂದಲೂ ತಂತ್ರಜ್ಞಾನ ಮತ್ತು ಆರೋಗ್ಯ ಕ್ಷೇತ್ರದ ಮೇಲೆ ಅಪಾರ ಆಸಕ್ತಿಯಿತ್ತು. ಮಾಜಿ ರಾಷ್ಟ್ರಪತಿ, ‘ಮಿಸೈಲ್ ಮ್ಯಾನ್’ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ತತ್ವಗಳಿಂದ ಪ್ರಭಾವಿತನಾಗಿದ್ದ ಈತ, ತನ್ನ ತಾಂತ್ರಿಕ ಜ್ಞಾನವನ್ನ ಸಮಾಜದಲ್ಲಿರುವ ನಿಜವಾದ ಸಮಸ್ಯೆಗಳನ್ನ ಪರಿಹರಿಸಲು ಬಳಸಬೇಕು ಎಂದು ನಿರ್ಧರಿಸಿದ್ದ. ಅದರ ಫಲವಾಗಿಯೇ ಆತನ ಗಮನ ಎಐ ತಂತ್ರಜ್ಞಾನದ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿ ಮಾಡುವತ್ತ ಹರಿಯಿತು. ಸಣ್ಣ ವಯಸ್ಸಿನಲ್ಲೇ ಬಹುದೊಡ್ಡ ಗುರಿಯನ್ನು ಹೊತ್ತು ಆತ ತನ್ನ ಪ್ರಯೋಗಗಳನ್ನು ಆರಂಭಿಸಿದ.
ಕೇವಲ 7 ಸೆಕೆಂಡ್ಗಳಲ್ಲಿ ಹೃದಯ ಕಾಯಿಲೆ ಪತ್ತೆಹಚ್ಚುವ ಸರ್ಕಾಡಿಯನ್ ಎಐ ಸಿದ್ಧಾರ್ಥ್ನ ಈ ಪರಿಶ್ರಮದ ಪ್ರತಿಫಲವೇ ಸರ್ಕಾಡಿಯನ್ ಎಐ. ಇದೊಂದು ಮೊಬೈಲ್ ಅಪ್ಲಿಕೇಶನ್ ಆಗಿದ್ದು, ಕೃತಕ ಬುದ್ಧಿಮತ್ತೆಯ ಸಹಾಯದಿಂದ ವ್ಯಕ್ತಿಯ ಹೃದಯದ ಬಡಿತದ ಶಬ್ದಗಳನ್ನ ರೆಕಾರ್ಡ್ ಮಾಡಿ ವಿಶ್ಲೇಷಿಸುತ್ತದೆ. ವರದಿಗಳ ಪ್ರಕಾರ, ಈ ಆ್ಯಪ್ ಕೇವಲ ಏಳು ಸೆಕೆಂಡ್ಗಳಲ್ಲಿ ಹೃದಯದ ಶಬ್ದಗಳನ್ನ ಪ್ರಕ್ರಿಯೆಗೊಳಿಸಿ, ಭವಿಷ್ಯದಲ್ಲಿ ಎದುರಾಗಬಹುದಾದ ಹೃದಯ ಕಾಯಿಲೆ ಅಥವಾ ಹೃದಯರಕ್ತನಾಳದ ಅಸಹಜತೆಗಳನ್ನ ನಿಖರವಾಗಿ ಪತ್ತೆಹಚ್ಚುವ ಸಾಮರ್ಥ್ಯವನ್ನ ಹೊಂದಿದೆ.
7 ತಿಂಗಳ ಕಠಿಣ ಪರಿಶ್ರಮ ಮತ್ತು ಆಂಧ್ರಪ್ರದೇಶದಲ್ಲಿ ವೈದ್ಯಕೀಯ ಪರೀಕ್ಷೆ
ಈ ಆ್ಯಪ್ ಅನ್ನ ಸುಮ್ಮನೆ ರಾತ್ರೋರಾತ್ರಿ ಸೃಷ್ಟಿಸಿದ್ದಲ್ಲ ನೋಡಿ. ಇದಕ್ಕಾಗಿ ಸಿದ್ಧಾರ್ಥ್ ಸತತ ಏಳು ತಿಂಗಳುಗಳ ಕಾಲ ಕಷ್ಟ ಪಟ್ಟಿದ್ದಾನೆ. ಕೋಡಿಂಗ್, ಸಂಶೋಧನೆ ಹಾಗೂ ಆ್ಯಪ್ ಅನ್ನಾ ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಹಗಲಿರುಳು ಕೆಲಸ ಮಾಡಿದ್ದಾನೆ. ಕೇವಲ ಲ್ಯಾಬ್ಗೆ ಸೀಮಿತವಾಗದೆ, ಆಂಧ್ರಪ್ರದೇಶದ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿ, ಅಲ್ಲಿನ ರೋಗಿಗಳ ಹೃದಯ ಬಡಿತದ ಶಬ್ದಗಳನ್ನ ರೆಕಾರ್ಡ್ ಮಾಡಿ, ತನ್ನ ಆ್ಯಪ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾನೆ. ಈ ಆ್ಯಪ್ನ ಆರಂಭಿಕ ಫಲಿತಾಂಶಗಳು ತುಂಬಾ ಭರವಸೆ ನೀಡಿವೆ. 





