Published
3 weeks agoon
By
Akkare News
ಬೆಂಗಳೂರು: ಬೆಲೆ ಏರಿಕೆ, ಇಂಧನ ದರ ಮತ್ತು ಜೀವನ ವೆಚ್ಚಗಳ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಜನಸಾಮಾನ್ಯರು ಎದುರಿಸುತ್ತಿರುವ ಸಂಕಷ್ಟಗಳನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ನೀತಿಗಳಿಂದ ಜನರ ಮೇಲೆ ಆರ್ಥಿಕ ಭಾರ ಹೆಚ್ಚಾಗಿದೆ ಎಂದು ಆರೋಪಿಸಿದರು.
“ಪಂಚರಾಜ್ಯ ಚುನಾವಣೆ ನಡೆಯುತ್ತಿದೆ ಜನರು ಪರದಾಡುತ್ತಿದ್ದು, ಹೊಟೇಲ್‌ಗಳು ಬಂದ್ ಆಗುತ್ತಿವೆ. ಜನ ವಿದ್ಯುತ್ ಒಲೆ ಬಳಸುವ ಅನಿವಾರ್ಯತೆ ಎದುರಾಗಿದೆ. ಕಳೆದ ಹದಿನೈದು ದಿನಗಳಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ ಪ್ರಮಾಣ 10% ಏರಿಕೆಯಾಗಿದೆ. ಕೇಂದ್ರ ಸರ್ಕಾರ ಜನರಿಗೆ ಸೌದೆ ಭಾಗ್ಯ ನೀಡಿದ್ದು, ಎಲ್ಲಿಂದ ಸೌದೆ ಒದಗಿಸುವುದು” ಎಂದು ಲೇವಡಿ ಮಾಡಿದರು.
“ಯುದ್ಧಗಳ ನೆಪ, ಕೇಂದ್ರ ಸರ್ಕಾರದ ತಪ್ಪು ನಿರ್ಧಾರ, ನೀತಿಗಳಿಂದಾಗಿ ಇಂದು ದೇಶದ ಜನ ಬೆಲೆ ಏರಿಕೆಯಿಂದ ನರಳುತ್ತಿದ್ದಾರೆ. ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಮಾತ್ರವಲ್ಲ, ಟೋಲ್ ಶುಲ್ಕ, ರೈಲ್ವೇ ಟಿಕೆಟ್ ದರ ಎಲ್ಲವೂ ಹೆಚ್ಚಾಗಿದೆ. ಕೆಲವು ಅನಿವಾರ್ಯ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಬೆಲೆ ಏರಿಕೆ ತೀರ್ಮಾನ ಮಾಡಿದಾಗ ಯಾವ ರೀತಿ ಟೀಕೆ ಟಿಪ್ಪಣಿ ಬಂದಿವೆ ಎಂದು ಎಲ್ಲರಿಗೂ ಗೊತ್ತಿದೆ. ಸಾಮಾನ್ಯ ಜನರ ಮೇಲೆ ಕೇಂದ್ರ ಸರ್ಕಾರ ಬೆಲೆ ಏರಿಕೆ ಯುದ್ಧ ಮಾಡುತ್ತಿದೆ” ಎಂದರು.
ಜನರನ್ನ ಕೇಂದ್ರ ಸರ್ಕಾರ ಫೂಲ್ ಮಾಡುತ್ತಿದೆ. ನಾವು ಪಾದಯಾತ್ರೆ ಮಾಡಿದಾಗ ಈ ಬೆಲೆ ಏರಿಕೆ ಸಮಸ್ಯೆಯಿಂದ ಜನರು ಕಂಗೆಟ್ಟಿದ್ದು, ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆ ನೀಡಿ ಅವರಿಗೆ ಶಕ್ತಿ ತುಂಬಿದ್ದೇವೆ. ಈಗ ನಮ್ಮ ಗ್ಯಾರಂಟಿ ಯೋಜನೆಗಳು ಜನರಿಗೆ ಆರ್ಥಿಕವಾಗಿ ರಕ್ಷಣೆ ನೀಡಿವೆ” ಎಂದು ಹೇಳಿದರು.