Published
3 weeks agoon
By
Akkare News
ಗೋವಾದ ಕುರ್ಚೋರೆಮ್ ಪುರಸಭೆಯ ಬಿಜೆಪಿ ಕೌನ್ಸಿಲರ್ ಸುಶಾಂತ್ ನಾಯ್ಕ್ ಅವರ ಮಗ ಸೋಹಮ್ ನಾಯ್ಕ್ (20) ಎಂಬಾತನನ್ನು ಸುಮಾರು 25ರಿಂದ 30 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ದಕ್ಷಿಣ ಗೋವಾ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಸೋಹಮ್ ನಾಯ್ಕ್ ಕಳೆದ ಮೂರು ವರ್ಷಗಳಿಂದ ಬಾಲಕಿಯರ ಲೈಂಗಿಕ ಶೋಷಣೆ ನಡೆಸಿ, ಆ ದೃಶ್ಯಗಳನ್ನು ವಿಡಿಯೋ ಮಾಡಿಟ್ಟುಕೊಂಡು ಬಾಲಕಿಯರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಈ ವಿಡಿಯೋಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡ ಹಿನ್ನೆಲೆ ಕೃತ್ಯ ಬೆಳಕಿಗೆ ಬಂದಿದೆ.
ಮಾರ್ಚ್ 23ರಂದು ಆರೋಪಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಪೋಕ್ಸೊ ಕಾಯ್ದೆ, ಗೋವಾ ಮಕ್ಕಳ ಕಾಯ್ದೆ, ಐಟಿ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸೋಹಮ್ ನಾಯ್ಕ್ ವಿಡಿಯೋಗಳು ವೈರಲ್ ಆದ ಬಳಿಕ, ಮಾರ್ಚ್ 22ರಂದು ಸಾರ್ವಜನಿಕರು ಪೊಲೀಸ್ ಠಾಣೆ ಮುಂದೆ ಪ್ರತಿಭಟಿಸಿದ್ದರು.
ಮಂಗಳವಾರ (ಮಾ.24) ಪ್ರಕರಣವನ್ನು ಕ್ರೈಂ ಬ್ರ್ಯಾಂಚ್‌ಗೆ ವರ್ಗಾಯಿಸಲಾಗಿದೆ. ಈವರೆಗೆ ಮೂರು ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಇಬ್ಬರು ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ತನಿಖೆಯ ಪ್ರಕಾರ, ಕೃತ್ಯ ನಡೆದಾಗ ಆರೋಪಿ ಮತ್ತು ಸಂತ್ರಸ್ತರು ಇಬ್ಬರೂ ಅಪ್ರಾಪ್ತರಾಗಿದ್ದರು ಎಂದು timesofindia.indiatimes.com ವರದಿ ಮಾಡಿದೆ.
ತನಿಖೆಯನ್ನು ಪರಿಶೀಲಿಸಲು ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ದಕ್ಷಿಣ ಗೋವಾ ಎಸ್ಪಿ ಸಂತೋಷ್ ದೇಸಾಯಿ, ಈ ವಿಷಯದಲ್ಲಿ ಆರಂಭದಲ್ಲಿ ಒಂದು ಪ್ರಕರಣ ದಾಖಲಾಗಿದ್ದರೆ, ಸೋಮವಾರ ಇನ್ನೂ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ಪ್ರಮುಖ ಆರೋಪಿ ಎಂದು ಪರಿಗಣಿಸಲಾದ ಸೋಹಮ್‌ನನ್ನು ಪ್ರಸ್ತುತ ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರಾಗಿರುವ ಇತರ ಹಲವರನ್ನು ಸಹ ವಿಚಾರಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ತನಿಖೆಯ ಪ್ರಗತಿಯನ್ನು ಪರಿಶೀಲಿಸಲು ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ವರ್ಷಾ ಶರ್ಮಾ ಕರ್ಚೋರೆಮ್ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ಸಂತ್ರಸ್ತರ ಹೇಳಿಕೆಗಳ ಆಧಾರದ ಮೇಲೆ, ಇನ್ನೂ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಮತ್ತು ಸಂತ್ರಸ್ತರು ಕಾಲೇಜಿನಲ್ಲಿದ್ದಾಗ ಸುಮಾರು ಮೂರು ವರ್ಷಗಳ ಹಿಂದೆ ಈ ಘಟನೆಗಳು ನಡೆದಿವೆ. ವಿಡಿಯೋ ತುಣುಕುಗಳಲ್ಲಿ ಸಂತ್ರಸ್ತರು ಕಂಡು ಬಂದಿಲ್ಲ. ಆರೋಪಿಗಳ ಮೊಬೈಲ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಶರ್ಮಾ ಹೇಳಿದ್ದಾರೆ.