Connect with us

ಇತರ

“ನೈರ್ಮಲ್ಯ ಕಾರ್ಮಿಕರು ಕೆಲಸ ಬಿಡಲು ಸಾಧ್ಯವಿಲ್ಲ”: ದೇಶಾದ್ಯಂತ ಪ್ರತಿಭಟನೆಗೆ DASAM ಬೆಂಬಲ, ಉದ್ಯೋಗ ಖಾಯಂಗೊಳಿಸಲು ತೀವ್ರ ಒತ್ತಾಯ

Published

on

ನವದೆಹಲಿ: ಉದ್ಯೋಗ ಕ್ರಮಬದ್ಧಗೊಳಿಸುವಿಕೆ (ಖಾಯಂಗೊಳಿಸುವುದು), ನ್ಯಾಯಯುತ ವೇತನ, ಸಾಮಾಜಿಕ ಭದ್ರತೆ, ಸುರಕ್ಷಿತ ಕೆಲಸದ ವಾತಾವರಣ ಮತ್ತು ಕೆಲಸದ ಸ್ಥಳದಲ್ಲಿ ಮಾನವ ಘನತೆಯನ್ನು ಎತ್ತಿಹಿಡಿಯುವಂತೆ ಒತ್ತಾಯಿಸಿ ದೇಶದ ನಾನಾ ಭಾಗಗಳಲ್ಲಿ ನೈರ್ಮಲ್ಯ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ ‘ದಲಿತ ಆದಿವಾಸಿ ಶಕ್ತಿ ಅಧಿಕಾರ್ ಮಂಚ್’ (DASAM) ಸಂಪೂರ್ಣ ಒಗ್ಗಟ್ಟು ಮತ್ತು ಬೆಂಬಲ ವ್ಯಕ್ತಪಡಿಸಿದೆ. ಪಂಜಾಬ್, ಜೈಪುರ, ಬಿಹಾರ, ಚೆನ್ನೈ, ಇಂದೋರ್ ಸೇರಿದಂತೆ ದೇಶದ ಪ್ರಮುಖ ನಗರ ಹಾಗೂ ರಾಜ್ಯಗಳಲ್ಲಿ ಬೀದಿಗಿಳಿದು ಹೋರಾಡುತ್ತಿರುವ ಕಾರ್ಮಿಕರ ದೀರ್ಘಕಾಲದ ನ್ಯಾಯಯುತ ಬೇಡಿಕೆಗಳನ್ನು ಪುರಸಭೆಯ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರಗಳು ನಿರಂತರವಾಗಿ ನಿರ್ಲಕ್ಷಿಸುತ್ತಿರುವುದನ್ನು ಸಂಘಟನೆಯು ತೀವ್ರವಾಗಿ ಖಂಡಿಸಿದೆ. ದೇಶದ ಅತ್ಯಂತ ಅಗತ್ಯವಾದ ಕಾರ್ಯಪಡೆಯ ಹಕ್ಕುಗಳನ್ನು ತುಳಿಯುತ್ತಿರುವ ಈ ಧೋರಣೆಯು ಸರ್ಕಾರದ ಸಾಂಸ್ಥಿಕ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು DASAM ಆಕ್ರೋಶ ವ್ಯಕ್ತಪಡಿಸಿದೆ.

ಅಪಾಯಕಾರಿ ಪರಿಸ್ಥಿತಿಯಲ್ಲಿ ಶ್ರಮ: ಕೊನೆಯಿಲ್ಲದ ಶೋಷಣೆ ಅತ್ಯಂತ ಅಪಾಯಕಾರಿ, ಅಸಂಘಟಿತ ಮತ್ತು ಅಸುರಕ್ಷಿತ ವಾತಾವರಣದಲ್ಲಿ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದರೂ, ನೈರ್ಮಲ್ಯ ಕಾರ್ಮಿಕರು ಸಾರ್ವಜನಿಕ ಆರೋಗ್ಯ, ಪರಿಸರ ನೈರ್ಮಲ್ಯ ಮತ್ತು ನಗರಗಳ ಸುಗಮ ಕಾರ್ಯನಿರ್ವಹಣೆಯನ್ನು ದಿನನಿತ್ಯ ಕಾಯ್ದುಕೊಳ್ಳುತ್ತಿದ್ದಾರೆ ಎಂದು DASAM ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಆದಾಗ್ಯೂ, ದೇಶಾದ್ಯಂತ ಸಾವಿರಾರು ಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ಅಲ್ಪ ವೇತನಕ್ಕೆ ದುಡಿಸಿಕೊಳ್ಳಲಾಗುತ್ತಿದೆ. ಅವರಿಗೆ ಸಿಗಬೇಕಾದ ಶಾಸನಬದ್ಧ ಉದ್ಯೋಗ ಪ್ರಯೋಜನಗಳನ್ನು ನಿರಾಕರಿಸಲಾಗಿದ್ದು, ಯಾವುದೇ ರೀತಿಯ ಸಾಮಾಜಿಕ ಭದ್ರತಾ ರಕ್ಷಣೆಗಳಿಂದ ಹೊರಗಿಡಲಾಗಿದೆ. ಇದು ಮೂಲಭೂತ ಕಾರ್ಮಿಕ ಹಕ್ಕುಗಳು ಮತ್ತು ಸಾಂವಿಧಾನಿಕ ಖಾತರಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸಂಸ್ಥೆ ಪ್ರತಿಪಾದಿಸಿದೆ.

ನೈರ್ಮಲ್ಯ ಸೇವೆಯನ್ನು ಅತ್ಯಂತ ಗೌರವಾನ್ವಿತ ಸಾರ್ವಜನಿಕ ಸೇವೆ ಎಂದು ಸರ್ಕಾರಗಳು ತಕ್ಷಣವೇ ಗುರುತಿಸಬೇಕು. ಈ ಕಾರ್ಮಿಕರಿಗೆ ಸುರಕ್ಷಿತ ಉದ್ಯೋಗ, ಸೂಕ್ತ ಜೀವನ ವೇತನ, ಔದ್ಯೋಗಿಕ ಭದ್ರತೆ ಮತ್ತು ಸಾಮಾಜಿಕ ರಕ್ಷಣೆಗಳನ್ನು ಆದ್ಯತೆಯ ಮೇಲೆ ಒದಗಿಸಬೇಕು. ಪ್ರಸ್ತುತ ನೈರ್ಮಲ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಬಹುಪಾಲು ಕಾರ್ಮಿಕರು ಐತಿಹಾಸಿಕವಾಗಿ ತುಳಿತಕ್ಕೊಳಗಾದ ಪರಿಶಿಷ್ಟ ಜಾತಿ (SC) ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ತಲೆಮಾರುಗಳಿಂದ ಬಂದ ಸಾಮಾಜಿಕ ತಾರತಮ್ಯ ಮತ್ತು ಹೊರಗಿಡುವಿಕೆಯ ಕಾರಣದಿಂದಾಗಿ ಅವರು ಈ ಜಾತಿ ಆಧಾರಿತ ಉದ್ಯೋಗಗಳಲ್ಲಿ ಬಂಧಿಯಾಗುವಂತೆ ಒತ್ತಾಯಿಸಲ್ಪಟ್ಟಿದ್ದಾರೆ ಎಂದು ಸಂಘಟನೆ ಅತ್ಯಂತ ಕಳವಳದಿಂದ ಗಮನಿಸಿದೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version