ಪುತ್ತೂರು: ಜಿಮ್‌ನಲ್ಲಿ ವರ್ಕೌಟ್ ಮಾಡುವ ಸಂದರ್ಭದಲ್ಲಿ ಎದೆನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡು ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ. ಆರ್ಯಾಪು ಗ್ರಾಮ ಕುಂಜೂರುಪಂಜ ನಿವಾಸಿ ರಮೇಶ್ ರೈ ಅವರ ಪುತ್ರ ಹಾಗೂ ನೆಹರು ನಗರದ ಖಾಸಗಿ ಕಾಲೇಜೊಂದರ ಅಂತಿಮ ವರ್ಷದ ಬಿ.ಕಾಂ. ವಿದ್ಯಾರ್ಥಿ ಶ್ರಮಿಕ್ ರೈ (20) ಮೃತಪಟ್ಟ ವ್ಯಕ್ತಿ.
ಬೊಳುವಾರಿನ ಜಿಮ್‌ಸೆಂಟರ್‌ವೊಂದರಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಶ್ರಮಿಕ್ ಅವರಿಗೆ ಏಕಾಏಕಿ ಉಸಿರುಕಟ್ಟಿದ್ದು, ಕೂಡಲೇ ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಈ ಘಟನೆ ಕುರಿತು ವಿಷಯ ತಿಳಿದು ಶಾಸಕ ಅಶೋಕ್ ಕುಮಾರ್ ರೈ ಅವರು ಮೃತ ವಿದ್ಯಾರ್ಥಿಯ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದ್ದು, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.