ಒಡಿಶಾ ಎ.29: ಒಡಿಶಾದಲ್ಲಿ ಬುಡಕಟ್ಟು ಸಮುದಾಯದ ವ್ಯಕ್ತಿಯೋರ್ವ ತನ್ನ ಮೃತ ಸೋದರಿಯ ಖಾತೆಯಲ್ಲಿದ್ದ ಹಣವನ್ನು ಪಡೆಯುವ ಪ್ರಯತ್ನದಲ್ಲಿ ಆಕೆಯ ಅಸ್ಥಿಪಂಜರವನ್ನು ಬ್ಯಾಂಕ್ ಗೆ ಹೊತ್ತೊಯ್ದಿದ್ದ ಘಟನೆಗೆ ಸಂಬಂಧಿಸಿದಂತೆ ಒಡಿಶಾ ಗ್ರಾಮೀಣ ಬ್ಯಾಂಕ್ ನ ಮಲ್ಲಿಪಾಸಿ ಶಾಖೆಯು, ಆತ ಪಾನಮತ್ತನಾಗಿದ್ದ ಮತ್ತು ಖಾತೆ ಇತ್ಯರ್ಥ ಪ್ರಕ್ರಿಯೆಯ ಬಗ್ಗೆ ಆತನಿಗೆ ತಿಳಿದಿರಲಿಲ್ಲ ಎಂದು ಹೇಳಿದೆ. ಎರಡು ದಿನಗಳ ಹಿಂದೆ ನಡೆದಿದ್ದ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಕಿಯೋಂಝಾರ್ ಜಿಲ್ಲೆಯ ದಿಯಾನಾಲಿ ಗ್ರಾಮದ ನಿವಾಸಿ ಜಿತು ಮುಂಡಾ ಶಾಖಾ ವ್ಯವಸ್ಥಾಪಕರು ವಿವರಿಸಿದ್ದ ಕಾರ್ಯವಿಧಾನವನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ ಎಂದು ಬ್ಯಾಂಕ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಖಾತೆಯಲ್ಲಿದ್ದ ಹಣವನ್ನು ಹಿಂಪಡೆಯಲು ಮೃತ ಮಹಿಳೆಯ ಉಪಸ್ಥಿತಿಗಾಗಿ ಬ್ಯಾಂಕ್ ಅಧಿಕಾರಿಗಳು ಒತ್ತಾಯಿಸಿದ್ದರಿಂದ ಜಿತು ಮುಂಡಾ ಸೋದರಿಯ ಅಸ್ಥಿಪಂಜರವನ್ನು ಬ್ಯಾಂಕ್ ಶಾಖೆಗೆ ಹೊತ್ತೊಯ್ದಿದ್ದರು ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವರದಿಗಳು ತಪ್ಪು ಮತ್ತು ಅವು ನಿಜಾಂಶಗಳನ್ನು ಆಧರಿಸಿಲ್ಲ ಎಂದು ಬ್ಯಾಂಕ್ ತಿಳಿಸಿದೆ.ಇಂದು ಸರ್ಕಾರಿ ಅಧಿಕಾರಿಗಳು ಮಹಿಳೆಯ ಮರಣ ಪ್ರಮಾಣಪತ್ರ ಮತ್ತು ಕಾನೂನುಬದ್ಧ ಉತ್ತರಾಧಿಕಾರ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ. ‘ ಈ ದಾಖಲೆಗಳನ್ನು ಸ್ವೀಕರಿಸಿದ ತಕ್ಷಣವೇ ಸ್ಥಾಪಿತ ನಿಯಮಗಳಿಗೆ ಅನುಗುಣವಾಗಿ ಬ್ಯಾಂಕು ಮೃತ ಮಹಿಳೆಯ ಖಾತೆಯಲ್ಲಿದ್ದ 19,402 ರೂ. ಅನ್ನು ಮೂವರು ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಪಾವತಿಸಿದೆ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.