Published
5 months agoon
By
Akkare Newsಕಡಬ/ಎಡಮಂಗಲ: ಕಡಬ ತಾಲೂಕು ವ್ಯಾಪ್ತಿಯ ಎಡಮಂಗಲ ಗ್ರಾಮದ ಕರಿಂಬಿಲ ಕಿ.ಪ್ರಾ. ಶಾಲೆಯಲ್ಲಿ ಜು. 14 ರಂದು ಸಂಜೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಗುರುಪೂಜೆ ಕಾರ್ಯಕ್ರಮ ನಡೆಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಸರಕಾರಿ ಶಾಲೆಯ ಆವರಣದೊಳಗೆ ಅಥವಾ ಮೈದಾನವನ್ನು ಕೂಡಾ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಕೊಡಬಾರದೆಂಬ ಸುತ್ತೋಲೆ ಇರುವಾಗ ಶಾಲೆಯ ಒಳಗೆಯೇ ಆರ್‌ಎಸ್‌ಎಸ್ ಕಾರ್ಯಕ್ರಮವನ್ನು ಮಾಡಲು ಅವಕಾಶ ಕೊಟ್ಟದ್ದು ಹೇಗೆ ಎಂದು ಸ್ಥಳೀಯ ಕೆಲವರು ಶಿಕ್ಷಣ ಇಲಾಖೆಗೆ ಮತ್ತು ಜಿಲ್ಲಾಡಳಿತಕ್ಕೆ ಪ್ರಶ್ನೆ ಮಾಡಿದ್ದಾರೆನ್ನಲಾಗಿದೆ.
ಶಿಕ್ಷಣ ಇಲಾಖೆಯಿಂದ ಶಾಲಾ ಮುಖ್ಯೋಪಾಧ್ಯಾಯರಿಗೆ ಬುಲಾವ್ ಹೋಗಿ ಅವರಿಂದ ವಿವರಣೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಗುರುಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾದವರಲ್ಲಿ ಕೆಲವರು ಕಾರ್ಯಕ್ರಮದ ಭಾವಚಿತ್ರವನ್ನು ತಮ್ಮ ಸ್ಟೇಟಸ್‌ನಲ್ಲಿ ಹಾಕಿಕೊಂಡದ್ದರಿಂದ ಈ ಕಾರ್ಯಕ್ರಮ ನಡೆದ ಬಗ್ಗೆ ಇತರರಿಗೆ ತಿಳಿಯಿತೆನ್ನಲಾಗಿದೆ.
ಈ ಭಾವಚಿತ್ರದಲ್ಲಿ ದ.ಕ.ಜಿ.ಪಂ.ಕಿ.ಪ್ರಾ.ಶಾಲೆ ಕರಿಂಬಿಲ ಎಂಬ ಹೆಸರಿರುವ ಕರಿಹಲಗೆ ಮತ್ತು ಕೊಟಡಿಯೊಳಗಿನ ದೃಶ್ಯಗಳು ಕಂಡುಬರುತ್ತಿವೆ. ಈ ಭಾವಚಿತ್ರ ಈಗ ವೈರಲ್ ಆಗಿದೆ.
ಈ ಘಟನೆಯ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯಿನಿಯವರನ್ನು ಮಾದ್ಯಮದವರು ಸಂಪರ್ಕಿಸಿ ವಿಚಾರಿಸಿದಾಗ ಶಾಲೆಯಲ್ಲಿ ದುರಸ್ತಿ ಮತ್ತಿತರ ಕಾಮಗಾರಿಗಳು, ಕಾರ್ಯಕ್ರಮಗಳು ನಡೆಯುತ್ತಿದ್ದುದರಿಂದ ನಾನು ಶಾಲಾ ಕೀಯನ್ನು ಎಸ್‌ಡಿಎಂಸಿ ಅಧ್ಯಕ್ಷರಲ್ಲಿ ನೀಡಿದ್ದೆ.
ಶಾಲೆಯೊಳಗೆ ಈ ಕಾರ್ಯಕ್ರಮ ನಡೆಯುವ ವಿಚಾರ ನನಗೆ ಗೊತ್ತಿರಲಿಲ್ಲ ಎಂದು ಅವರು ತಿಳಿಸಿದ್ದಾರ ಈ ಘಟನೆ ಬಗ್ಗೆ ಸ್ಥಳೀಯ ಕಾಂಗ್ರೆಸ್ ಮುಖಂಡ ರಮೇಶ್ ಕೋಟೆ ಅವರು ಶಾಲೆಗಳು ಎಂದೂ ಜಾತ್ಯಾತೀತ ನೆಲೆಯಲ್ಲಿ ಇರಬೇಕು. ಯಾವುದೇ ಒಂದು ಧರ್ಮಾಧಾರಿತವಾಗಿರಬಾರದು.
ಆರ್‌ಎಸ್‌ಎಸ್ ಎಂಬ ಸಂಘಟನೆಗೆ ಶಾಲಾ ರಜಾದಿನದಲ್ಲಿ ಶಾಲೆಯನ್ನು ತೆರೆದುಕೊಟ್ಟು ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟ ಶಿಕ್ಷಣಾಧಿಕಾರಿ, ಮುಖ್ಯ ಶಿಕ್ಷಕಿ, ಎಸ್‌ಡಿಎಂಸಿ ಅಧ್ಯಕ್ಷರ ಮೇಲೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಘಟನೆಯ ಬಗ್ಗೆ ಮೇಲಾಧಿಕಾರಿಗಳ ಸೂಚನೆಯಂತೆ ಸುಳ್ಯ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಸೂಕ್ತ ತನಿಖೆಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ.