Published
11 months agoon
By
Akkare News
ಕರ್ನಾಟಕ ಪೊಲೀಸ್, ಸಿಬಿಐ ತನಿಖೆ ಬಳಿಕವೂ ಪ್ರಕರಣದಲ್ಲಿ ಕ್ಲೀನ್‌ಚಿಟ್ ಪಡೆದುಕೊಂಡಿದ್ದ ಉದಯ್ ಕುಮಾರ್ ಜೈನ್ ಸೇರಿದಂತೆ ಧೀರಜ್ ಕೆಲ್ಲಾ, ಮಲ್ಲಿಕ್ ಜೈನ್‌ಗೆ ಎಸ್‌ಐಟಿ ಬುಲಾವ್ ನೀಡಿದೆ. ಹೀಗಾಗಿ ಆರೋಪ ಹೊತ್ತ ಉದಯ್ ಕುಮಾರ್ ಜೈನ್ ಎಸ್‌ಐಟಿ ಕಚೇರಿಗೆ ಆಗಮಿಸಿದ್ದಾರೆ.
ಎಸ್‌ಐಟಿ ಕಚೇರಿಗೆ ಭೇಟಿ ನೀಡುವ ಮುನ್ನ ʻಪಬ್ಲಿಕ್ ಟಿವಿʼ ಜೊತೆಗೆ ಉದಯ್ ಕುಮಾರ್ ಜೈನ್ ಮಾತನಾಡಿದ್ದಾರೆ. ಸೌಜನ್ಯ ತಾಯಿ ಎಸ್‌ಐಟಿಗೆ ಕೊಟ್ಟ ದೂರಿನ ಮೇರೆಗೆ ಅಥವಾ ಚಿನ್ನಯ್ಯ ನೀಡಿದ ಕೇಳಿಕೆಯ ಕಾರಣದಿಂದಲೂ ನನ್ನನ್ನ ಎಸ್‌ಐಟಿ ಕರೆದಿರಬಹುದು. ಯಾವುದೇ ತನಿಖೆಗೂ ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಮುಂದುವರಿದು.. ಇದು ಬುರುಡೆ ಪ್ರಕರಣದ ದಿಕ್ಕು ತಪ್ಪಿಸುವ ಹುನ್ನಾರ. ಒಂದು ವಿಡಿಯೋನಲ್ಲಿ ಸೌಜನ್ಯ ಕೊಲೆಯಾದ ಸಂದರ್ಭದಲ್ಲಿ ನಾನು ಇರಲಿಲ್ಲ ಅಂತ ಒಂದು ವಿಡಿಯೋನಲ್ಲಿ ಹೇಳಿದ್ದಾನೆ. ಮತ್ತೊಂದು ವಿಡಿಯೋನಲ್ಲಿ ನಾನೇ ಆಕೆಯನ್ನ ಹೊತ್ಕೊಂಡು ಹೋಗೋದು ನೋಡಿದ್ದೇನೆ ಅಂತ ಹೇಳಿದ್ದಾನೆ. ಸಿನಿಮೀಯ ರೀತಿಯಲ್ಲಿ ಕಥೆ ಕಟ್ಟಿದ್ದಾನೆ. ಈಗ ಸೌಜನ್ಯ ಪ್ರಕರಣದಲ್ಲಿ ನನ್ನ ಬಗ್ಗೆ ಆರೋಪ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಈಗಾಗಲೇ ಗುಂಡಿ ಎಲ್ಲಾ ತೋಡಿಯಾಗಿದೆ, ಈಗ ವಿಷಯಾಂತರ ಮಾಡಲು ಈ ರೀತಿ ಮಾಡುತ್ತಿದ್ದಾರೆ. ಬುರುಡೆ ಪ್ರಕರಣ ಮುಚ್ಚಿ ಹಾಕಲು ಈ ಪ್ರಕರಣವನ್ನ ಮತ್ತೆ ಮುನ್ನಲೆಗೆ ತರುತ್ತಿದ್ದಾರೆ. ಸಿಐಡಿ, ಸಿಬಿಐ ನನ್ನನೂ ತನಿಖೆ ನಡೆಸಿದ್ದಾರೆ. ಬ್ರೈನ್ ಮ್ಯಾಪಿಂಗ್ ಕೂಡ ಮಾಡಿದ್ದಾರೆ, ಇವತ್ತು ಮತ್ತೆ ಎಸ್‌ಐಟಿ ಕರೆದಿದ್ದಾರೆ. ನಾವು ಯಾವುದೇ ವಿಚಾರಣೆಗೂ ಸಿದ್ಧ ಎಂದು ಉದಯ್ ಕುಮಾರ್ ಜೈನ್ ಹೇಳಿದ್ದಾರೆ.