ಸುರತ್ಕಲ್: ಸುರತ್ಕಲ್ ಬಂಟರ ಸಂಘ (ರಿ) ಮತ್ತು ಮಹಿಳಾ ವೇದಿಕೆಯ ಸಹಯೋಗದಲ್ಲಿ “ಆಟಿದ ಪೊರ್ಲು ಮತ್ತು ಅಭಿನಂದನಾ ಕಾರ್ಯಕ್ರಮ” ಭಾನುವಾರ ಸುರತ್ಕಲ್ ಬಂಟರ ಭವನದಲ್ಲಿ ಜರುಗಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರು, ಎಲ್ಲಾ ಬಂಟರ ಸಂಘದ ಕಾರ್ಯಕ್ರಮಗಳಲ್ಲಿ ಸುರತ್ಕಲ್ ಬಂಟರ ಸಂಘವನ್ನು ಉದಾಹರಣೆಯಾಗಿ ನೀಡುತ್ತೇವೆ. ಬಂಟರ ಒಗ್ಗಟ್ಟು, ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸುರತ್ಕಲ್ ಬಂಟರ ಸಂಘ ಎಲ್ಲಾ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ. ಬಂಟರ ಸಂಘ ನನ್ನ ತಾಯಿಯ ಮನೆಯಂತೆ ಯಾವುದೇ ರೀತಿಯ ರಾಜಕೀಯ ಬೆರೆಸದೆ ಎಲ್ಲಾ ರೀತಿಯಲ್ಲೂ ಸಂಘದ ಜೊತೆ ನಿಲ್ಲುವುದಾಗಿ ಅವರು ಭರವಸೆ ನುಡಿದರು.ಬಳಿಕ ಮಾತನಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು, ಬಂಟ ಸಮುದಾಯ ಸ್ವ ಸಮುದಾಯದ ಜೊತೆಗೆ ಸಹೋದರ ಸಮುದಾಯಗಳನ್ನೂ ಪ್ರೀತಿಸುವವರು. ಎಲ್ಲಾ ಸಮುದಾಯಗಳೊಂದಿಗೆ ಅನ್ಯೋನ್ಯತೆಯ ಜೀವನದ ಜೊತೆಗೆ ಜಾತಿ ಮತಗಳ ಸಂಕೋಲೆಯನ್ನು ಮೀರಿ ಎಲ್ಲಾ ಸಮುದಾಯಗಳಿಗೆ ಎಲ್ಲಾ ರೀತಿಯ ಸಹಾಯ, ಸಹಕಾರ ನೀಡುವುದು ಬಂಟರ ಸಂಸ್ಕೃತಿ. ಬಂಟರು ಯಾವುದೇ ಕ್ಷೇತ್ರದಲ್ಲಿದ್ದರೂ ಅವರು ತಮ್ಮ ತಮ್ಮ ಅಧಿಕಾರಕ್ಕೆ ಮಾತ್ರ ಸೀಮಿತರಾಗದೆ ಅವರು ಕುಳಿತಿರುವ ಆಸನಗಳಿಗೆ ಬೆಲೆ ಬರುವಂತೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿರಬೇಕೆಂದು ಸಲಹೆ ನೀಡಿದರು. ಮಂಗಳೂರು ಪದುವಾ ಕಾಲೇಜ್ ಆಫ್ ಕಾಮರ್ಸ್ ಮತ್ತು ಮ್ಯಾನೇಜ್ ಮೆಂಟ್ ನ ಪ್ರೊ. ಅಕ್ಷಯ ಆರ್. ಶೆಟ್ಟಿ ಅವರು, ಆಟಿದ ಕುರಿತಾಗಿ ದಿಕ್ಸೂಚಿ ಭಾಷಣ ಗೈದರು. ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘ (ರಿ)ನ ಪ್ರಧಾನ ಕಾರ್ಯದರ್ಶಿ ಎಂ. ಕರುಣಾಕರ ಶೆಟ್ಟಿ, ತುಳು ವರ್ಲ್ಡ್ ಫೌಂಡೇಶನ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಮೊದಲಾದವರು ಮಾತನಾಡಿದರು. ಇದೇ ವೇಳೆ ಎನ್ ಸಿ ಸಿ ಅತ್ಯುತ್ತಮ ಕೆಡೆಟ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಯುಕ್ತಿ ಪಿ. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಕೃಷಿ ಕ್ಷೇತ್ರದ ಸಾಧಕ ವಾಮನ ಶೆಟ್ಟಿ ಸೂರಿಂಜೆ, ಸಾಹಿತ್ಯ, ರಂಗಭೂಮಿ ಕಲಾವಿದೆ ಗೀತಾ ಸುರತ್ಕಲ್, ಭರತನಾಟ್ಯ ಚಂದ್ರಶೇಖರ ನಾವಡ ಚೇಳ್ಯಾರು, ಲಲಿತ ಕಲೆ ಸಾಧಕ ಧನಪಾಲ್ ಶೆಟ್ಟಿಗಾರ್ ತಡಂಬೈಲು, ಗುಡಿಕೈಗಾರಿಗೆ ಸಾಧಕಿ ವಾರಿಜಾ ಡಿ. ಬಂಗೇರ ಕುಳಾಯಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು ಮತ್ತು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ವಹಿಸಿದ್ದರು. ಸಮಾರಂಭದಲ್ಲಿ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ವೈ., ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆ ಅಧ್ಯಕ್ಷೆ ಸರೋಜ ಟಿ. ಶೆಟ್ಟಿ ಹಾಗೂ ಸುರತ್ಕಲ್ ಬಂಟರ ಸಂಘ ಮತ್ತು ಬಂಟರ ಸಂಘ ಮಹಿಳಾ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.