ಉಪ್ಪಿನಂಗಡಿ: ಶಾಲಾ ರಜೆಯ ದಿನ ಆಟವಾಡಿ ಮನೆಗೆ ಮರಳುತ್ತಿದ್ದ ಇಬ್ಬರು ಬಾಲಕರನ್ನು ಹಿರೆಬಂಡಾಡಿ ಗ್ರಾಮದ ಅಡ್ಕಲ್ ಎಂಬಲ್ಲಿ ಅಪರಿಚಿತರ ತಂಡವೊಂದು ಕಾರಿನಲ್ಲಿ ಬರಲು ಒತ್ತಾಯ ಮಾಡಿ ಬೆನ್ನಟ್ಟಿರುವ ಕುರಿತು ಬಾಲಕರ ಪೋಷಕರು ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದಾರೆ. ಶನಿವಾರ ಶಾಲಾ ರಜೆ ಇದ್ದ ಕಾರಣ, ಹಿರೆಬಂಡಾಡಿ ಗ್ರಾಮದ ಮುಡಿಪು ಹಾಗೂ ಕಡೊಂಟ್ಟು ಪರಿಸರದ ಬಾಲಕರು ಸಮೀಪದ ಶಾಲಾ ಮೈದಾನದಲ್ಲಿ ಆಟವಾಡಲು ಹೋಗಿದ್ದರು. ಆಟ ಮುಗಿಸಿ ವಾಪಾಸು ಬರುವ ಸಂದರ್ಭದಲ್ಲಿ ಅಡ್ಕಲ್ ಎಂಬಲ್ಲಿ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿಕೊಂಡಿದ್ದ ನಾಲ್ಕು ಐದು ಮಂದಿಯ ತಂಡ ಬಾಲಕರನ್ನು ತಡೆದಿದೆ ಎನ್ನಲಾಗಿದೆ. ನಾವು ಅದೇ ದಾರಿಯಲ್ಲಿ ಹೋಗುವುದು, ನಿಮ್ಮನ್ನು ಡ್ರಾಪ್ ಮಾಡುತ್ತೇವೆ ಬನ್ನಿ ಎಂದು ಕಾರು ಹತ್ತುವಂತೆ ಒತ್ತಾಯ ಮಾಡಿರುವುದಾಗಿ ಬಾಲಕರು ತಿಳಿಸಿರುವುದಾಗಿ ವರದಿಯಾಗಿದೆ.ಬಾಲಕರು ಕಾರು ಹತ್ತಲು ನಿರಾಕರಣೆ ಮಾಡಿದಾಗ, ಅಲ್ಲಿದ್ದ ಇಬ್ಬರು ಬಾಲಕರನ್ನು ಹಿಡಿಯಲು ಬೆನ್ನಟ್ಟಿದ್ದಾರೆ. ಇದರಿಂದ ಭಯಗೊಂಡ ಬಾಲಕರು ಕೂಡಲೇ ಅಲ್ಲಿಂದ ಓಡಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳೀಯ ಪ್ರತ್ಯಕ್ಷದರ್ಶಿಗಳ ಪ್ರಕಾರ, ಆ ಕಾರು ಅದೇ ಪರಿಸರದಲ್ಲಿ ಸುಮಾರು ಹೊತ್ತಿನಿಂದ ಅನುಮಾನಾಸ್ಪದವಾಗಿ ಸಂಚರಿಸುತ್ತಿತ್ತು ಎನ್ನಲಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಾಲಕರ ಪೋಷಕರು, ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರನ್ನು ನೀಡಿರುವುದಾಗಿ ವರದಿಯಾಗಿದೆ.