Connect with us

ಸ್ಥಳೀಯ

ದಕ್ಷಿಣ ಕನ್ನಡ | ಅಡಿಕೆಗೆ ಕೊಳೆ: ಕೃಷಿಕರ ಆದಾಯಕ್ಕೆ ಬರೆ

Published

on

ಮಂಗಳೂರು:: ತೋಟಗಳಲ್ಲಿ ಅಡಿಕೆ ಮರಗಳಿಗೆ ಸಾಮೂಹಿಕವಾಗಿ ಕೊಳೆ ರೋಗ ಹರಡಿದೆ. ರೋಗದಿಂದ ತಪ್ಪಿಸಿಕೊಂಡಿರುವ ತೋಟಗಳೇ ವಿರಳ ಎಂಬಂತಾಗಿದೆ. ರೋಗ ತಗುಲಿದ ಮರಗಳಿಂದ ಉದುರಿ ನೆಲದ ಮೇಲೆ ಹಾಸಿರುವ ಅಡಿಕೆ ಕಾಯಿಗಳನ್ನು ಕಂಡು ಬೆಳೆಗಾರರ ಒಡಲು ಸುಡುತ್ತಿದೆ.
ಕೈಗೆ ಬಂದ ಫಸಲು ಕಣ್ಣೆದುರೇ ಕಮರುತ್ತಿದೆ.ಮರದ ಬುಡದಲ್ಲಿ ನಿತ್ಯವೂ ಎಳೆ ಅಡಿಕೆ ಕಾಯಿಗಳು ರಾಶಿ ಬೀಳುತ್ತಿವೆ. ಮರದಲ್ಲಿ ಉಳಿದ ಬೆಳೆಯನ್ನಾದರೂ ಉಳಿಸಿಕೊಳ್ಳಲು ಬೆಳೆಗಾರರು ಹೆಣಗಾಡುತ್ತಿದ್ದಾರೆ. ತೋಟಗಳಲ್ಲಿ ಬೋರ್ಡೊ ದ್ರಾವಣ ಸಿಂಪಡಿಸುವ ಕೆಲಸ ಭರದಿಂದ ನಡೆಯುತ್ತಿದೆ.


ಕೊಳೆರೋಗದಿಂದ ಉದುರಿರುವ ಎಳೆ ಅಡಿಕೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ ಕೊನೆಯ ವಾರದಿಂದ ಪ್ರಾರಂಭವಾಗಿ ಬಿಡುವಿಲ್ಲದೆ ಸುರಿದ ಮಳೆಗೆ ಅಡಿಕೆ ತೋಟಗಳು ನಲುಗಿವೆ. ಜಿಲ್ಲೆಯಲ್ಲಿ 1.02 ಲಕ್ಷ ಹೆಕ್ಟೇರ್‌ನಲ್ಲಿ ಅಡಿಕೆ ಬೆಳೆ ಇದ್ದು, ಶೇ 95ರಷ್ಟು ತೋಟಗಳಲ್ಲಿ ಕೊಳೆರೋಗ  ಹರಡಿದೆ.

‘ಗೊನೆತುಂಬಿ ಬಂದ ಫಸಲು ಬೆಳೆಗಾರರಲ್ಲಿ ಭರವಸೆ ಮೂಡಿಸಿತ್ತು. ಆದರೆ, ಬೆಳವಣಿಗೆ ಹಂತದಲ್ಲಿರುವಾಗಲೇ ಕೊಳೆರೋಗ ತಗುಲಿ, ಅಡಿಕೆ ಕಾಯಿಗಳು ನೆಲದಲ್ಲಿ ಹಾಸಿವೆ. 10 ಕ್ವಿಂಟಲ್ ಬೆಳೆ ಸಿಗಬೇಕಾಗಿದ್ದ ತೋಟದಲ್ಲಿ ಈ ಬಾರಿ 2 ಕ್ವಿಂಟಲ್ ಸಿಗುವುದೂ ಅನುಮಾನ’ ಎನ್ನುತ್ತಾರೆ ಬೆಳ್ತಂಗಡಿ ತಾಲ್ಲೂಕಿನ ಬೆಳೆಗಾರ ಪ್ರಕಾಶ್ ಎಳನೀರು.

‘ನಿರಂತರ ಸುರಿದ ಮಳೆಯಿಂದ ಅಡಿಕೆ ತೋಟಗಳಿಗೆ ಕೊಳೆ ರೋಗ ಹರಡಿದೆ. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಇತ್ತೀಚೆಗೆ ನಡೆಸಿದ ಬೆಳೆಗಾರರ ಸಮೀಕ್ಷೆ ಪ್ರಕಾರ ಶೇ 95ರಷ್ಟು ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ಶೇ 40ಕ್ಕಿಂತ ಹೆಚ್ಚು ಬೆಳೆ ಕಳೆದುಕೊಂಡ ಬೆಳೆಗಾರರೇ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಮೊದಲಾದ ಅಡಿಕೆ ಬೆಳೆಯುವ ಜಿಲ್ಲೆಗಳ ರೈತರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು’ ಎನ್ನುತ್ತಾರೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version