ಪುತ್ತೂರು:* ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪುತ್ತೂರು ತಾಲೂಕು ಘಟಕದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ 111ನೇ ಸಂಸ್ಥಾಪನಾ ದಿನಾಚರಣೆಯನ್ನು ಇಂದು ಅತ್ಯಂತ ವಿನೂತನವಾಗಿ ಆಚರಿಸಲಾಯಿತು. ಪುತ್ತೂರಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಆವರಣದಲ್ಲಿ ಸಾರ್ವಜನಿಕರಿಗೆ ನಡೆದ ಕನ್ನಡ ರಸಪ್ರಶ್ನೆ ಹಾಗೂ ಪುಸ್ತಕ ಬಹುಮಾನ ಕಾರ್ಯಕ್ರಮವು ಜನಸಾಮಾನ್ಯರ ಸಾಹಿತ್ಯ ಪ್ರೇಮಕ್ಕೆ ಸಾಕ್ಷಿಯಾಯಿತು. ಕಾರ್ಯಕ್ರಮವನ್ನು ಪುತ್ತೂರು ಕೆ.ಎಸ್.ಆರ್.ಟಿ.ಸಿ ಘಟಕದ ಮೇಲ್ವಿಚಾರಕರಾದ ಶ್ರೀ ಪೂರ್ಣೇಶ್ ಅವರು ಉದ್ಘಾಟಿಸಿ, ಪರಿಷತ್ತಿನ ಈ ವಿಭಿನ್ನ ಪ್ರಯತ್ನಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಾದ ಶ್ರೀ ಭಾಸ್ಕರ ಶೆಟ್ಟಿ ಹಾಗೂ ಪುತ್ತೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಅಬ್ದುಲ್ ಸಮದ್ ಭಾವ ಅವರು ಉಪಸ್ಥಿತರಿದ್ದರು. ಪುತ್ತೂರು ತಾಲೂಕು ಕ.ಸಾ.ಪ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಕ.ಸಾ.ಪ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಗಡಿನಾಡ ಧ್ವನಿ ಶ್ರೇಯೋಭಿವೃದ್ಧಿ ಟ್ರಸ್ಟ್ (ರಿ.) ಸಂಸ್ಥಾಪಕರಾದ ಡಾ. ಹಾಜಿ ಎಸ್. ಅಬೂಬಕ್ಕರ್ ಆರ್ಲಪದವು ಅವರು ಆಶಯ ನುಡಿಗಳನ್ನಾಡುತ್ತಾ, “ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಪಂಡಿತರಿಗೆ ಸೀಮಿತವಾಗದೆ, ಜನಸಾಮಾನ್ಯರ ಮನೆ-ಮನಗಳನ್ನು ತಲುಪಿದಾಗ ಮಾತ್ರ ಸಂಸ್ಥಾಪಕರ ಕನಸು ನನಸಾಗಲು ಸಾಧ್ಯ. ಬಸ್ ನಿಲ್ದಾಣದಂತಹ ಸಾರ್ವಜನಿಕ ಸ್ಥಳದಲ್ಲಿ ಪುಸ್ತಕಗಳನ್ನು ಬಹುಮಾನವಾಗಿ ನೀಡುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಮುಂದಿನ ಪೀಳಿಗೆಯಲ್ಲಿ ಓದುವ ಸಂಸ್ಕೃತಿಯನ್ನು ಬಿತ್ತುವ ಕೆಲಸ ಮಾಡುತ್ತಿದೆ ಎಂದು ತಿಳಿಸಿ ಶುಭ ಹಾರೈಸಿದರು. ರಂಗಕರ್ಮಿಗಳಾದ ಶ್ರೀ ರಂಗಯ್ಯ ಬಲ್ಲಾಳ್ ಅವರು ಕನ್ನಡ ರಸಪ್ರಶ್ನೆಯನ್ನು ಅತ್ಯಂತ ಅಚ್ಚುಕಟ್ಟಾಗಿ ಮತ್ತು ಆಕರ್ಷಕವಾಗಿ ನಡೆಸಿಕೊಟ್ಟರು. ಇವರ ಪ್ರಶ್ನೆಗಳಿಗೆ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ನಿಲ್ದಾಣದಲ್ಲಿದ್ದ ಸಾರ್ವಜನಿಕರು ಮುಗಿಬಿದ್ದು ಉತ್ತರಿಸಿದರು. ಸುಮಾರು 500ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ರಸಪ್ರಶ್ನೆಯಲ್ಲಿ ಭಾಗವಹಿಸಿ ಪುಸ್ತಕಗಳನ್ನು ಬಹುಮಾನವಾಗಿ ಪಡೆದುಕೊಂಡು ಸಂಭ್ರಮಿಸಿದರು. ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಮತಿ ಶಂಕರಿ ಶರ್ಮ ಅವರು ಅತಿಥಿಗಳನ್ನು ಸ್ವಾಗತಿಸಿ, ಅತ್ಯಂತ ಸುಂದರವಾಗಿ ನಿರೂಪಿಸಿದರು. ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರಿಗೆ ಈ ಕಾರ್ಯಕ್ರಮವು ಕೇವಲ ಮನೋರಂಜನೆಯಾಗಿರದೆ, ಜ್ಞಾನದ ಹಬ್ಬವಾಗಿಯೂ ಮೂಡಿಬಂತು. ಪ್ರಯಾಣಿಕರ ಕೈಯಲ್ಲಿ ಟಿಕೆಟಿನ ಜೊತೆಗೆ ಕನ್ನಡ ಪುಸ್ತಕಗಳು ರಾರಾಜಿಸುತ್ತಿತ್ತು. ಸಾಹಿತ್ಯ ಪರಿಷತ್ತಿನ ಈ ವಿನೂತನ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.