Published
2 hours agoon
By
Akkare News
ಕೆಪಿಎಸ್ ಶಾಲೆಗಳ ಉದ್ದೇಶ, ಗುಣಮಟ್ಟ ಮತ್ತು ಅಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಹಾಗೂ ಪೋಷಕರಿಗೆ ಸ್ಪಷ್ಟ ಮಾಹಿತಿ ಒದಗಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇತ್ತೀಚಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ದಾಖಲಾದ ಐತಿಹಾಸಿಕ ಹಾಗೂ ಅತ್ಯುತ್ತಮ ಫಲಿತಾಂಶಕ್ಕಾಗಿ ಶಿಕ್ಷಕರು ಹಾಗೂ ಅಧಿಕಾರಿಗಳ ಹಗಲಿರುಳಿನ ಶ್ರಮವನ್ನ ಸಚಿವ ಮಧು ಬಂಗಾರಪ್ಪ ಅವರು ಶ್ಲಾಘಿಸಿದರು. ಇಲಾಖೆಯ 29-ಅಂಶಗಳ ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದು, ಪಾರದರ್ಶಕ ಮೌಲ್ಯಮಾಪನ ಮತ್ತು ರಾಜ್ಯಮಟ್ಟದಲ್ಲಿ ಸಿದ್ಧಪಡಿಸಿದ ಪ್ರಶ್ನೆಪತ್ರಿಕೆಗಳ ಮೂಲಕ ಉಚಿತವಾಗಿ ನಡೆಸಲಾದ ಪೂರ್ವಸಿದ್ಧತಾ ಪರೀಕ್ಷೆಗಳು ಈ ಸಾಧನೆಗೆ ಕಾರಣವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಆಡಳಿತಾತ್ಮಕ ಜವಾಬ್ದಾರಿಗಳ ಬಗ್ಗೆ ಸಚಿವರು ಸ್ಪಷ್ಟ ನಿರ್ದೇಶನಗಳನ್ನು ನೀಡಿದರು. ದಾಖಲಾತಿ ಅಭಿಯಾನ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯನ್ನ ಗರಿಷ್ಠ ಮಟ್ಟಕ್ಕೆ ಏರಿಸುವುದು ಮೊದಲ ಆದ್ಯತೆಯಾಗಬೇಕು. ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಗುರುತಿಸಿ, ಜಾಗೃತಿ ಮೂಡಿಸಿ ಮರಳಿ ಶಾಲೆಗೆ ತರಬೇಕು. ಶಾಲಾ ಬಿಸಿಯೂಟ ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಬೇಕು. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇದರಲ್ಲಿ ಯಾವುದೇ ರೀತಿಯ ಲೋಪದೋಷಗಳಾಗದಂತೆ ಎಚ್ಚರವಹಿಸುವುದು ಕಡ್ಡಾಯ. ಶಾಲಾ ಪ್ರಾರಂಭದಲ್ಲೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ಸೇರಿದಂತೆ ಎಲ್ಲಾ ಅಗತ್ಯ ಸಾಮಗ್ರಿಗಳನ್ನು ಸಕಾಲದಲ್ಲಿ ವಿತರಿಸಬೇಕು. ಡಿಡಿಪಿಐ, ಬಿಇಒ, ಸಿಆರ್‌ಪಿ ಮತ್ತು ಬಿಆರ್‌ಪಿ ಅಧಿಕಾರಿಗಳು ಕೇವಲ ಕಡತಗಳ ಪರಿಶೀಲನೆ ಮಾಡದೆ, ಶಾಲೆಗಳಿಗೆ ನಿಯಮಿತವಾಗಿ ಭೇಟಿ ನೀಡಿ ಗುಣಮಟ್ಟದ ಬೋಧನೆ ಮತ್ತು ಶಿಕ್ಷಕರ ಹಾಜರಾತಿಯನ್ನು ಖಚಿತಪಡಿಸಿಕೊಳ್ಳಬೇಕು.