Connect with us

ಶಾಲಾ ಚಟುವಟಿಕೆ

ಕೊಂಬೆಟ್ಟು ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಸಾಧಕರ ಸಾಧನಾ ಮಂದಿರ ಕೊಂಬೆಟ್ಟು ಬೋರ್ಡ್ ಹೈಸ್ಕೂಲ್: ಸುರೇಶ್ ರೈ ಪಡ್ಡಂಬೈಲು

Published

on

ಸಾವಿರಾರು ಸಂಖ್ಯೆಯ ಸಾಧಕರ ಬದುಕಿಗೆ ಪ್ರೇರಣೆಯಾದ ಕೊಂಬೆಟ್ಟು ವಿದ್ಯಾಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವ ಅವಕಾಶ ಪಡೆಯುವವರು ಭಾಗ್ಯಶಾಲಿಗಳು. ಇದು ಸಾಧಕರನ್ನು ರೂಪಿಸುವ ಒಂದು ಸಾಧನಾ ಮಂದಿರ. ಇಲ್ಲಿನ ಸಾಧನೆಗಳಿಗೆ ಮುಖ್ಯ ಕಾರಣರಾಗುವವರು ಇಲ್ಲಿನ ದೇವದುರ್ಲಭ ಶಿಕ್ಷಕರು. ಈ ಕಾರಣದಿಂದಾಗಿ ಈ ಸಂಸ್ಥೆಯ ಆಡಳಿತ ನಿರ್ವಹಣೆಯೂ ಸುಲಭವಾಗುತ್ತದೆ. ವಿದ್ಯಾರ್ಥಿಗಳು ಈ ಸದವಕಾಶವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಬೇಕು” ಎಂದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅಡ್ವೊಕೇಟ್ ಸುರೇಶ್ ರೈ ಪಡ್ಡಂಬೈಲು ನುಡಿದರು.
ಅವರು ಶಾಲೆಯ ನೂತನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಬೆಳಿಗ್ಗೆ ಶಾಲೆಗೆ ನೂತನವಾಗಿ ದಾಖಲಾದ 203 ವಿದ್ಯಾರ್ಥಿಗಳನ್ನು ಆರತಿ ಬೆಳಗಿ ಪುಷ್ಪಾರ್ಚನೆಗೈದು ಸಂಸ್ಥೆಗೆ ಬರಮಾಡಿಕೊಳ್ಳಲಾಯಿತು.
ನಂತರ ನಡೆದ ಪೋಷಕ ಶಿಕ್ಷಕ ಮಹಾಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳಿಗೆ ಸರಕಾರದಿಂದ ಕೊಡಮಾಡುವ ಉಚಿತ ಪಠ್ಯಪುಸ್ತಕಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್. ಸಿ. ಪರೀಕ್ಷೆಯಲ್ಲಿ 620 ಅಂಕಗಳನ್ನು ಪಡೆದ ಶಿಲ್ಪಾ ವಿಧಾತ್ರಿ, 615 ಅಂಕಗಳನ್ನು ಪಡೆದ ಭಾನುಪ್ರಿಯ, 611 ಅಂಕಗಳನ್ನು ಪಡೆದ ಪ್ರೇಯಸ್ ರೈ ಇವರುಗಳನ್ನು ಅಭಿನಂದಿಸಲಾಯಿತು. ಶಾಲಾಭಿವೃದ್ಧಿ ಸಮಿತಿಯಲ್ಲಿ ತೆರವಾಗಿದ್ದ ಸೇತು, ಅಬ್ದುಲ್ ಗಫೂರ್, ವಿನಿತಾ ಹಾಗೂ ಸುರೇಶ್ ರೈ ಪಡ್ಡಂಬೈಲು ಇವರ ನಾಲ್ಕು ಸ್ಥಾನಗಳಿಗೆ ನೂತನ ಸದಸ್ಯರುಗಳಾಗಿ ಪ್ರಾಣೇಶ್, ಸುಚರಿತಾ, ಅನಿಲ್ ಜಿ.ಪಾಯಸ್ ಹಾಗೂ ರಮೇಶ್ ಇವರನ್ನು ಆಯ್ಕೆಮಾಡಲಾಯಿತು. ಶಾಲಾಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷರಾಗಿ ಭಾಸ್ಕರ ರಾವ್ ಎಸ್. ಇವರನ್ನು ಆಯ್ಕೆ ಮಾಡಲಾಯಿತು.

ಶಾಲಾಭಿವೃದ್ಧಿ ಸಮಿತಿಯಲ್ಲಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ ಸುರೇಶ್ ರೈ ಇವರನ್ನು ಸನ್ಮಾನಿಸಲಾಯಿತು. ನಿವೃತ್ತ ಉಪಪ್ರಾಂಶುಪಾಲರಾದ ವಸಂತ ಮೂಲ್ಯರವರು ತಮ್ಮ ಸಾರ್ಥಕ ಬೀಳ್ಕೊಡುಗೆ ನಿಮಿತ್ತ ಹಮ್ಮಿಕೊಂಡ ವಸಂತಾಭಿವಂದನಮ್ ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ಯಶಸ್ಸುಗೊಳಿಸುವಲ್ಲಿ ಶ್ರಮಿಸಿದ ಶಾಲಾ ಶಿಕ್ಷಕವೃಂದದವರನ್ನು ಶಾಲು,ಸ್ಮರಣಿಕೆಯೊಂದಿಗೆ ಗೌರವಿಸಿದರು. ಜೊತೆಯಲ್ಲಿ ನಿರ್ಗಮಿತ ಸದಸ್ಯರಾದ ಸೇತು ಇವರನ್ನೂ ಅಭಿನಂದಿಸಲಾಯಿತು. ಸಹಶಿಕ್ಷಕಿ ಮಧುರಾರವರು ಮಾತೆಯರ ಸಮಿತಿ ರಚನೆಯ ಕಾರ್ಯವನ್ನು ನಿರ್ವಹಿಸಿದರು. ಆರಂಭದಲ್ಲಿ ಶಾಲಾಶಿಕ್ಷಕ ವೃಂದದವರು ಸೇರಿದ ಪೋಷಕ ಸಮೂಹಕ್ಕೆ ತಮ್ಮ ಸ್ವಪರಿಚಯವನ್ನು ಮಾಡಿಕೊಂಡರು.

ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶಿಕ್ಷಣ ತಜ್ಞ ಬಾಲಕೃಷ್ಣ ಗೌಡ ಬಿ.ಟಿ.ಹಾಗೂ ಶಿಕ್ಷಕವೃಂದದವರು ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರದಲ್ಲಿ ಪ್ರಭಾರ ಉಪಪ್ರಾಂಶುಪಾಲರಾದ ನಾಗರಾಜ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ಶಿಕ್ಷಕಿ ಶೋಭಾ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಮಮತಾ ರೈ ಅಭಿನಂದನಾ ಮಾತುಗಳನ್ನಾಡಿದರು. ಸಹಶಿಕ್ಷಕಿ ರಶ್ಮಿ ಸಾಧಕ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ಶಿಕ್ಷಕ ಪ್ರಶಾಂತ್ ಅನಂತಾಡಿ ಸನ್ಮಾನ ಪತ್ರ ವಾಚಿಸಿದರು. ಗ್ರೆಗೊರಿ ರೋನಿ ಪಾಯಸ್ ಶಾಲಾ ನಿಬಂಧನೆಗಳನ್ನು ಪರಿಚಯಿಸಿದರು. ಹಿರಿಯ ಶಿಕ್ಷಕಿ ಪ್ರಸನ್ನ ಕುಮಾರಿ ವಂದಿಸಿದರು. ಹಿರಿಯ ಶಿಕ್ಷಕರಾದ ಮರ್ಸಿ ಮಮತಾ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version