Published
3 months agoon
By
Akkare News
ಇಂಡಿಗೋ ವಿಮಾನಗಳ ಹಾರಾಟ ದಿಢೀರ್ ರದ್ದಾದ ಹಿನ್ನೆಲೆ ಕೆಲ ದಿನಗಳಿಂದ ಪ್ರಯಾಣಿಕರ ಆಕ್ರೋಶಕ್ಕೆ ಸಂಸ್ಥೆ ಗುರಿಯಾಗಿತ್ತು. ಇದೀಗ ಮತ್ತೆ ಕಾರ್ಯಾಚರಣೆ ಎಂದಿನಂತೆ ಸಹಜ ಸ್ಥಿತಿಗೆ ಬರುತ್ತಿರುವ ಸೂಚನೆ ನೀಡಿರುವ ಇಂಡಿಗೋ, ಇತ್ತೀಚೆಗೆ ಟಿಕೆಟ್ ಬುಕಿಂಗ್ ಮಾಡಿಯೂ ವಿಮಾನ ಪ್ರಯಾಣದಿಂದ ವಂಚಿತರಾದ ಪ್ರಯಾಣಿಕರಿಗೆ ರಿಲೀಫ್ ನೀಡಿದೆ. ಇತ್ತೀಚಿನ ಅಡಚಣೆಗೆ ಕ್ಷಮೆ ಕೋರಿರುವ ಇಂಡಿಗೋ, ಬರೋಬ್ಬರಿ 610 ಕೋಟಿ ರೂಪಾಯಿಯಷ್ಟು ಟಿಕೆಟ್ ಹಣವನ್ನು ಪ್ರಯಾಣಿಕರಿಗೆ ವಾಪಸ್ ನೀಡುವುದಾಗಿ ಘೋಷಿಸಿದೆ.
ವಿಮಾನಯಾನ ಸಂಸ್ಥೆಯು 137 ನಿಲ್ದಾಣಗಳಲ್ಲಿ ತನ್ನ ನೆಟ್‌ವರ್ಕ್ ವ್ಯಾಪ್ತಿಯನ್ನು ಪುನಃಸ್ಥಾಪಿಸಿದೆ ಎಂದು ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ. ಇಂಡಿಗೋ 1,650ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸುವ ಹಾದಿಯಲ್ಲಿದೆ. ನಿನ್ನೆ 1,500 ವಿಮಾನಗಳ ಹಾರಾಟದಿಂದ ಇದು ಹೆಚ್ಚಾಗಿದೆ ಎಂದು ವಿಮಾನಯಾನ ಸಂಸ್ಥೆ ಇಂದು ಮಾಹಿತಿ ನೀಡಿದೆ. ಈಗ 138 ತಾಣಗಳಲ್ಲಿ 137 ಸ್ಥಳಗಳು ಕಾರ್ಯಾಚರಣೆಯಲ್ಲಿದ್ದು, ಸಮಯಕ್ಕೆ ಸರಿಯಾಗಿ ಶೇ 75ರಷ್ಟು ಕಾರ್ಯಕ್ಷಮತೆಯನ್ನು ಹೊಂದಿವೆ ಎಂದು ಹೇಳಿದೆ.
ವರದಿಗಳ ಪ್ರಕಾರ ದೇಶದಾದ್ಯಂತ ಇಂಡಿಗೋ ವಿಮಾನಯಾನ ಸಂಸ್ಥೆಯು ಸತತ ಆರನೇ ದಿನವಾದ ಭಾನುವಾರವೂ ಕೆಲ ಅಡಚಣೆಗಳನ್ನು ಎದುರಿಸಿದೆ. ಮುಂಬೈ ಮತ್ತು ದೆಹಲಿ ವಿಮಾನ ನಿಲ್ದಾಣಗಳಲ್ಲಿ 220ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಇಂಡಿಗೋ ಭಾನುವಾರ 650ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದ್ದು, ತೊಂದರೆಗೊಳಗಾದ ಪ್ರಯಾಣಿಕರಿಗೆ ₹610 ಕೋಟಿಗೂ ಹೆಚ್ಚು ಟಿಕೆಟ್ ಮರುಪಾವತಿ ಪ್ರಕ್ರಿಯೆ ನಡೆದಿದೆ ಎಂದು ವರದಿಯಾಗಿದೆ.