ಬಿಲ್ಲವ ಸೇರಿದಂತೆ 20 ಉಪಜಾತಿಗಳ ಒಗ್ಗೂಡುವಿಕೆಗೆ ಶ್ರೀ ನಾರಾಯಣಗುರು ಮಹಾಒಕ್ಕೂಟ ರಚನೆ ನ.28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಉದ್ಘಾಟನೆ ರಾಜ್ಯಾದ್ಯಂತ ಸಮುದಾಯದ ಸಂಘಟನೆಗಳಿಗೆ ಏಕ ವೇದಿಕೆ
ಮಂಗಳೂರು: ಈಡಿಗ, ಬಿಲ್ಲವ, ದೀವರು, ನಾಮಧಾರಿ, ನಾಡರ, ತಿಯ್ಯ ಸೇರಿದಂತೆ ಸುಮಾರು 20 ಉಪಜಾತಿಗಳ ವಿವಿಧ ಸಂಘಟನೆಗಳನ್ನು ಒಗ್ಗೂಡಿಸಿ ‘ಶ್ರೀ ನಾರಾಯಣಗುರು ಮಹಾಒಕ್ಕೂಟ–ಕರ್ನಾಟಕ’ ಎಂಬ ಸಂಘಟನೆಯನ್ನು ರಚಿಸಲಾಗಿದೆ. ಇದರ ಉದ್ಘಾಟನಾ ಸಮಾರಂಭವು ನವೆಂಬರ್ 28ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಶ್ರೀ ನಾರಾಯಣಗುರು ಕಾಲೇಜಿನ ನಿರ್ದೇಶಕ ಎಂ.ಎಸ್. ಕೋಟ್ಯಾನ್ ತಿಳಿಸಿದರು. ಶುಕ್ರವಾರ ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಲ್ಲವ ಸಮುದಾಯವು ವಿವಿಧ ಉಪಜಾತಿಗಳ ಹೆಸರಿನಲ್ಲಿ ಹಂಚಿಹೋಗಿರುವುದರಿಂದ ಸಮುದಾಯದ ಒಟ್ಟು ಜನಸಂಖ್ಯೆಯ ಲೆಕ್ಕಾಚಾರ ಸಾಧ್ಯವಾಗುತ್ತಿಲ್ಲ. ಇದರಿಂದ ರಾಜಕೀಯವಾಗಿ ಹಿನ್ನಡೆಯಾಗುತ್ತಿದ್ದು, ಸಮುದಾಯಕ್ಕೆ ಸಿಗಬೇಕಾದ ಅವಕಾಶಗಳಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉಪಜಾತಿಗಳ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಗಳನ್ನು ಒಂದೇ ವೇದಿಕೆಯಡಿ ತರಲು ಮಹಾಒಕ್ಕೂಟ ರಚಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸುಮಾರು 250 ಸಂಘಟನೆಗಳಿದ್ದು, ಉಳಿದ ಜಿಲ್ಲೆಗಳ ಸಂಘಟನೆಗಳ ನಿಖರ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಸಮುದಾಯದವರನ್ನು ಸಂಪರ್ಕಿಸಲಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಪ್ರತಿ ತಾಲ್ಲೂಕಿಗೆ ಒಂದೊಂದು ಸಮಿತಿ ರಚಿಸಿ, ವ್ಯವಸ್ಥಿತವಾಗಿ ಮಹಾಒಕ್ಕೂಟವನ್ನು ಸಂಘಟಿಸಿ ಬೆಳೆಸಲಾಗುವುದು ಎಂದು ತಿಳಿಸಿದರು. ನ.28ರಂದು ಉದ್ಘಾಟನಾ ಸಮಾರಂಭ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮವನ್ನು ಕೇರಳದ ವರ್ಕಳ ಶಿವಗಿರಿ ಮಠದ ನಾರಾಯಣಗುರು ಧರ್ಮ ಸಂಘಂ ಅಧ್ಯಕ್ಷ ಸ್ವಾಮಿ ಋತಂಬರಾನಂದ ಉದ್ಘಾಟಿಸಲಿದ್ದಾರೆ. ಶ್ರೀ ನಾರಾಯಣಗುರು ಮಹಾಒಕ್ಕೂಟದ ಅಧ್ಯಕ್ಷ ಜೆ.ಪಿ. ಸುಧಾಕರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಸಚಿವ ಮಧು ಬಂಗಾರಪ್ಪ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವಿ. ಸುನಿಲ್ ಕುಮಾರ್, ಉಮಾನಾಥ್ ಕೋಟ್ಯಾನ್, ಬೇಳೂರು ಗೋಪಾಲಕೃಷ್ಣ, ಭೀಮಣ್ಣ ನಾಯ್ಕ, ಎಚ್.ಆರ್. ಗವಿಯಪ್ಪ, ಜಗದೇವ್ ಗುತ್ತೇದಾರ್, ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಹಾಒಕ್ಕೂಟದ ಸಂಘಟನಾ ಕಾರ್ಯದರ್ಶಿ ಸದಾನಂದ ಪೂಜಾರಿ, ಭಾಸ್ಕರ್ ಎಸ್. ಕೋಟ್ಯಾನ್ ಇರ್ವತ್ತೂರು, ನೀಲಯ್ಯ ಎಂ. ಅಗರಿ, ಅನಿಲ್ ಕುಮಾರ್, ದೀಪಕ್ ಪೂಜಾರಿ ಮುಲ್ಲಕಾಡು, ರಂಜನ್ ಮಿಜಾರ್, ಅಮಿತ್ ರಾಜ್, ಜಯಕುಮಾರ್, ಕಿರಣ್ ಕುಮಾರ್, ನಿಶನ್ ಪೂಜಾರಿ, ಗೋಪಾಲಕೃಷ್ಣ ಕುಂದರ್, ಸತೀಶ್ ಪೂಜಾರಿ, ಚಿತ್ತರಂಜನ್ ಬೋಳಾರ್, ಸುಧಾಕರ್ ಕರ್ಕೇರ, ಸಂತೋಷ್ ಬಿಜೈ, ನೀಲಾರಾಮ್ ಯು., ದೀಪಕ್ ಆಡುಮರೋಳಿ, ದೀಪಕ್ ಪೂಜಾರಿ ಮಂಗಳಾದೇವಿ, ಯಶವಂತ್ ಕಡೆಶ್ಯಾಲಯ, ಕಿಶೋರ್ ಮುಲ್ಲಕಾಡು, ಅವಿನಾಶ್ ಸುವರ್ಣ, ರಕ್ಷಿತ್ ಪೂಜಾರಿ ಹಾಗೂ ಲೀಲಾಕ್ಷ ಕರ್ಕೇರ ಉಪಸ್ಥಿತರಿದ್ದರು.