Connect with us

ಸ್ಥಳೀಯ

ರಸ್ತೆ ಬದಿಯ ಮಾವಿನ ಮಿಡಿ ತೆಗೆಯುದಕ್ಕೆ ಬ್ರೇಕ್… ಈಗ ಸಾರ್ವಜನಿಕರಿಗೆ ಸಿಗುತ್ತಿದೆ “ಕಾಟ್ ಕುಕ್ಕು ” : ಇದು ಅಶೋಕ್ ಕುಮಾರ್ ರೈ ಯವರ ಸಾಧನೆಯ ಫಲ

Published

on

ಪುತ್ತೂರು: ರಸ್ತೆ ಬದಿಯ ಮಾವಿನ ಮರಗಳು ಈ ಬಾರಿ ಕೇವಲ ನೆರಳು ನೀಡುತ್ತಿಲ್ಲ, ಬದಲಿಗೆ ಹಾದಿಹೋಕರಿಗೆ ಮತ್ತು ಮಕ್ಕಳಿಗೆ ಸವಿರುಚಿಯನ್ನೂ ಉಣಬಡಿಸುತ್ತಿವೆ. ಶಾಸಕ ಅಶೋಕ್ ರೈ ಅವರು ಹೊರಡಿಸಿದ್ದ ಒಂದು ವಿಭಿನ್ನ ಆದೇಶದಿಂದಾಗಿ, ಇಂದು ಮರಗಳಲ್ಲಿ ಮಾವಿನ ಹಣ್ಣುಗಳು ಸಮೃದ್ಧವಾಗಿ ಬೆಳೆದು ನಿಂತಿವೆ. ರಸ್ತೆ ಬದಿಯಲ್ಲಿರುವ ಕಾಡು ಮಾವು ಸೇರಿದಂತೆ ಇತರ ಮಾವಿನ ಮರಗಳಿಂದ ಮಾವಿನ ಮಿಡಿಗಳನ್ನು ಕೊಯ್ಯಬಾರದು ಎಂದು ಶಾಸಕರು ಹೊರಡಿಸಿದ್ದ ಆದೇಶದ ಹಿನ್ನೆಲೆಯಲ್ಲಿ ಮರಗಳಲ್ಲಿ ಮಾವಿನ ಹಣ್ಣುಗಳು ತುಂಬಿ ತುಳುಕುತ್ತಿದ್ದು, ಗಾಳಿ ಮಳೆಗೆ ಹಣ್ಣುಗಳು ನೆಲಕ್ಕೆ ಬೀಳುತ್ತಿದ್ದು ಮಕ್ಕಳು, ದಾರಿಹೋಕರು ಹಣ್ಣುಗಳನ್ನು ಹೆಕ್ಕಿಕೊಂಡು ಬೇಕಾದಷ್ಟು ತಿಂದು ಉಳಿದದ್ದನ್ನು ಮನೆಗೆ ಕೊಂಡೋಯ್ಯುತ್ತಿದ್ದಾರೆ.

 

ಮಾವಿನ ಮಿಡಿ ಕೊಯ್ಲಿಗೆ ಬಿದ್ದಿತ್ತು ಬ್ರೇಕ್
ಸಾಮಾನ್ಯವಾಗಿ ಮಾವು ಕಾಯಿ ಬಿಡುತ್ತಿದ್ದಂತೆ ಉಪ್ಪಿನಕಾಯಿ ವ್ಯಾಪಾರಿಗಳು ಮತ್ತು ಸ್ಥಳೀಯರು ಎಳೆ ಮಿಡಿಗಳನ್ನು ಕೊಯ್ದು ಮಾರಾಟ ಮಾಡುತ್ತಿದ್ದರು. ಇದರಿಂದ ಮರದಲ್ಲಿ ಹಣ್ಣುಗಳು ಉಳಿಯುತ್ತಿರಲಿಲ್ಲ. ಇದನ್ನು ಗಮನಿಸಿದ ಪುತ್ತೂರು ಶಾಸಕ ಅಶೋಕ್ ರೈಯವರು “ರಸ್ತೆ ಬದಿಯ ಮರಗಳಿಂದ ಮಿಡಿಗಳನ್ನು ಕೊಯ್ಯಬಾರದು, ಅವು ಹಣ್ಣಾಗಲು ಬಿಡಬೇಕು” ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ರಸ್ತೆ ಬದಿಯ ಮರಗಳಲ್ಲಿ ಮಾವಿನ ಮಿಡಿಗಳು ಹಣ್ಣಾದರೆ ಅದು ಮನುಷ್ಯರಿಗೆ ಅಲ್ಲದೆ ಪ್ರಾಣಿಗಳಿಗೂ ಆಹಾರವಾಗುತ್ತದೆ. ಇದರಿಂದ ಅದೆಷ್ಟೋ ಪ್ರಾಣಿಗಳು, ಪಕ್ಷಿಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಆದ್ದರಿಂದ ಯಾರೂ ಕೂಡ ಮಾವಿನ ಮರಗಳಿಂದ ಮಿಡಿಗಳನ್ನು ಕೊಯ್ಯಬಾರದು ಎಂದು ಆದೇಶ ಹೊರಡಿಸಿದ್ದರು.

 

ಮರಗಳಲ್ಲಿ ಹಣ್ಣುಗಳ ಸಡಗರ
ಶಾಸಕರ ಈ ನಿರ್ಧಾರದಿಂದಾಗಿ ಈ ಬಾರಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮಿಡಿಗಳನ್ನು ಕೀಳದ ಕಾರಣ ಮರದ ಕೊಂಬೆಗಳು ಹಣ್ಣಿನ ಭಾರಕ್ಕೆ ಬಾಗಿವೆ. ಶಾಲೆಗೆ ಹೋಗುವ ಮಕ್ಕಳು ಮತ್ತು ಸ್ಥಳೀಯರು ಮರದಿಂದ ಕೆಳಗೆ ಬಿದ್ದ ಹಣ್ಣುಗಳನ್ನು ಹೆಕ್ಕಿ ತಿನ್ನುತ್ತಾ ಸಂಭ್ರಮಿಸುತ್ತಿದ್ದಾರೆ. ಹಣ್ಣುಗಳು ಹೆಚ್ಚಾಗಿರುವುದರಿಂದ ಪಕ್ಷಿ-ಸಂಕುಲಕ್ಕೂ ಈ ಬಾರಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮರ ತುಂಬಾ ಮಂಗಗಳು, ಬಾವಲಿ, ಅಳಿಲುಗಳು ಸೇರಿದಂತೆ ಇತರ ಪ್ರಾಣಿ ಪಕ್ಷಿಗಳು ಬಂದು ಹಣ್ಣುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ದೃಶ್ಯ ಕಂಡು ಬರುತ್ತಿದೆ.

 

ಸಾರ್ವಜನಿಕರ ಮೆಚ್ಚುಗೆ
ಹಿಂದೆಲ್ಲಾ ಮಿಡಿಗಳನ್ನೇ ಕದ್ದು ಅಥವಾ ಏಲಂ ಮುಖಾಂತರ ಮಾರಾಟ ಮಾಡುತ್ತಿದ್ದರು. ಆದರೆ ಶಾಸಕರ ಆದೇಶದಿಂದಾಗಿ ಇಂದು ಮಕ್ಕಳಿಗೆ ರಸ್ತೆ ಬದಿಯಲ್ಲೇ ನೈಸರ್ಗಿಕವಾಗಿ ಹಣ್ಣಾದ ಮಾವು ತಿನ್ನಲು ಸಿಗುತ್ತಿದೆ. ಇದಲ್ಲದೆ ಬಹಳಷ್ಟು ಪ್ರಾಣಿ, ಪಕ್ಷಿಗಳಿಗೂ ಆಹಾರ ಸಿಗುತ್ತಿದೆ. ಇದು ನಿಜಕ್ಕೂ ಉತ್ತಮ ಕಾರ್ಯ” ಎಂದು ಸ್ಥಳೀಯ ನಿವಾಸಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಕಟ್ಟಡಗಳಲ್ಲ, ಪ್ರಕೃತಿಯನ್ನು ಉಳಿಸಿ ಬೆಳೆಸುವುದು ಕೂಡ ಹೌದು ಎಂಬುದನ್ನು ಈ ನಡೆ ಸಾಬೀತುಪಡಿಸಿದೆ. ಅಶೋಕ್ ರೈ ಅವರ ಈ ಸಣ್ಣ ಬದಲಾವಣೆ ಇಂದು ಬಹಳಷ್ಟು ಮಕ್ಕಳ ಮುಖದಲ್ಲಿ ಮುಗುಳ್ನಗು ಮೂಡಿಸಿದರೆ, ಅದೆಷ್ಟೋ ಪ್ರಾಣಿ, ಪಕ್ಷಿಗಳಿಗೆ ಆಹಾರ ಸಿಕ್ಕಿದಂತಾಗಿದೆ.

‘ ಶಾಸಕರ ಈ ಆದೇಶದಿಂದಾಗಿ ಇಂದು ಎಲ್ಲಾ ಮಾವಿನ ಮರಗಳಲ್ಲಿ ಮಾವಿನ ಹಣ್ಣು ನೋಡಲು ಸಿಗುತ್ತಿದೆ. ಮಕ್ಕಳು ಖುಷಿಯಿಂದ ಹಣ್ಣುಗಳನ್ನು ಹೆಕ್ಕಿ ತಿನ್ನುತ್ತಿದ್ದಾರೆ. ಹಣ್ಣುಗಳು ಪ್ರಾಣಿ ಪಕ್ಷಿಗಳಿಗೂ ಆಹಾರವಾಗುತ್ತಿದೆ.’
ರಕ್ಷಿತ್ ರೈ ಮುಗೇರು,
ಸ್ಥಳೀಯರು

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version