ಬೆಂಗಳೂರು, ಏ.29: ತಿರುಪತಿ ತಿರುಮಲ ದೇವಸ್ಥಾನಕ್ಕೆ ನಂದಿನಿ ತುಪ್ಪ ಪೂರೈಕೆಗೆ ಬಮುಲ್ ದೊಡ್ಡ ಒಪ್ಪಂದವನ್ನು ಕೈಗೊಂಡಿದೆ. ಮುಂದಿನ ಆರು ತಿಂಗಳ ಕಾಲ ಸುಮಾರು 20 ಲಕ್ಷ ಕೆ.ಜಿ ತುಪ್ಪವನ್ನು ಸರಬರಾಜು ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಬಮುಲ್, ಗುಣಮಟ್ಟದ ಉತ್ಪನ್ನಗಳೊಂದಿಗೆ ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಈ ಒಪ್ಪಂದದ ಮೂಲಕ ಕರ್ನಾಟಕದ ಹಾಲು ಉತ್ಪಾದಕರಿಗೂ ಹೆಚ್ಚಿನ ಬೆಂಬಲ ದೊರೆಯಲಿದ್ದು, ನಂದಿನಿ ಬ್ರ್ಯಾಂಡ್ ಗೆ ಮತ್ತಷ್ಟು ಗೌರವ ಹೆಚ್ಚಾಗಿದೆ. ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ಕಚೇರಿಯಲ್ಲಿ ಸುರೇಶ್ ಅವರು ಬುಧವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಇದಕ್ಕೂ ಮೊದಲು ತಿರುಪತಿಗೆ ತುಪ್ಪ ಪೂರೈಕೆ ವಾಹನಕ್ಕೆ ಬಮುಲ್ ನಿರ್ದೇಶಕರು, ಅಧಿಕಾರಿಗಳ ಜತೆಗೆ ಹಸಿರು ಬಾವುಟ ತೋರಿ ಬೀಳ್ಕೊಟ್ಟರು.
“ತಿರುಪತಿಗೆ ನಂದಿನಿ ತುಪ್ಪ ಪೂರೈಕೆಗೆ ನಾವು ಟೆಂಡರ್ ಪಡೆದಿದ್ದು, ಇದರ ಮೊತ್ತ 136 ಕೋಟಿ ರೂಪಾಯಿಗಳು. ಪ್ರತಿನಿತ್ಯ 12.5 ಟನ್ ನಂತೆ ಮುಂದಿನ ಆರು ತಿಂಗಳು ತುಪ್ಪ ಸರಬರಾಜಾಗಲಿದೆ. ಬಮುಲ್ ಒಕ್ಕೂಟ ಟಿಟಿಡಿ ಜೊತೆ ಪ್ರತ್ಯೇಕವಾಗಿ ಒಪ್ಪಂದ ಮಾಡಿಕೊಂಡು ಈ ಸರಬರಾಜು ಮಾಡುತ್ತಿದೆ. ಗುಣಮಟ್ಟದಲ್ಲಿ, ರುಚಿಯಲ್ಲಿ ನಂದಿನಿ ತುಪ್ಪ ರಾಷ್ಟ್ರ ಮಟ್ಟದಲ್ಲಿ ಹೆಸರನ್ನು ಗಳಿಸಿದೆ” ಎಂದರು. ‘ ಸಾಗಾಣಿಕೆಗೆ ಡಿಜಿಟಲ್ ಲಾಕ್ ತಂತ್ರಜ್ಞಾನ “ಸಾಗಾಣಿಕೆಗೆ ಡಿಜಿಟಲ್ ಲಾಕ್ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ನಾವು ಕೊಟ್ಟ ಪಾಸ್ ವರ್ಡ್ ಅಲ್ಲಿ ನಮೂದಿಸಿದರೆ ಮಾತ್ರ ತೆರೆಯಬಹುದು. ಗ್ರಾಹಕರಿಗೂ ಸಹ ಇದೆ ರೀತಿ ಗುಣಮಟ್ಟದ ಪದಾರ್ಥ ನೀಡುತ್ತಿದ್ದೇವೆ” ಎಂದರು. “ಶ್ರೀ ವೆಂಕಟೇಶ್ವರ ಸ್ವಾಮಿ , ಪದ್ಮಾವತಿ ಅಮ್ಮನವರ ಆಶೀರ್ವಾದ ನಮ್ಮ ನಂದಿನಿಯ ಮೇಲೆ ಇರುವ ಕಾರಣಕ್ಕೆ ಇದು ಸಾಧ್ಯವಾಗಿದೆ. ನಂದಿನಿ ಹೆಸರನ್ನು ದುರ್ಬಳಕೆ ಮಾಡಿಕೊಂಡು ಮಾರುಕಟ್ಟೆಯಲ್ಲಿ ಅಕ್ರಮ ಎಸಗುತ್ತಿರುವವರ ವಿರುದ್ದ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ಈಗಾಗಲೇ ಅಂತಹವರ ವಿರುದ್ದ ಒಕ್ಕೂಟದಿಂದ ದೂರುಗಳನ್ನು ನೀಡಲಾಗಿದೆ” ಎಂದರು.