ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೇ 10ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದು, ಈ ಭೇಟಿ ವೇಳೆ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಭೇಟಿ ಎಂದು ತಿಳಿದುಬಂದಿದೆ. ಈ ವರ್ಷ ಆರ್ಟ್ ಆಫ್ ಲಿವಿಂಗ್ ತನ್ನ 45ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, ಸಂಸ್ಥೆಯ ಸ್ಥಾಪಕ ಶ್ರೀ ಶ್ರೀ ರವಿಶಂಕರ್ ಅವರು ತಮ್ಮ 70ನೇ ಹುಟ್ಟುಹಬ್ಬವನ್ನೂ ಇದೇ ಸಂದರ್ಭದಲ್ಲಿ ಆಚರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಶ್ರಮದಲ್ಲಿ ವಿಶೇಷ ಕಾರ್ಯಕ್ರಮಗಳು ಆಯೋಜಿಸಲಾಗುತ್ತಿವೆ. ಕಾರ್ಯಕ್ರಮದ ಭಾಗವಾಗಿ ಪ್ರಧಾನಿ ಮೋದಿ ಅವರು ಆಶ್ರಮಕ್ಕೆ ಭೇಟಿ ನೀಡುತ್ತಿದ್ದು, ಇದೇ ವೇಳೆ ಆಶ್ರಮದ ಆವರಣದಲ್ಲಿ ನಿರ್ಮಿಸಲಾದ ಹೊಸ ಧ್ಯಾನ ಮಂದಿರವನ್ನು ಉದ್ಘಾಟಿಸಲಿದ್ದಾರೆ.ಈ ಧ್ಯಾನ ಮಂದಿರವು ಯೋಗ ಮತ್ತು ಧ್ಯಾನ ಅಭ್ಯಾಸಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ತಿಳಿದುಬಂದಿದೆ.