Published
3 months agoon
By
Akkare News
ಮೈಸೂರು: ಪ್ರಚೋದನಕಾರಿ ಭಾಷಣ ಮಾಡುವವರು ಮಾತ್ರ ದ್ವೇಷ ಭಾಷಣ ತಡೆ ಮಸೂದೆಯನ್ನು ವಿರೋಧಿಸುತ್ತಾರೆ. ಕುಂಬಳಕಾಯಿ ಕಳ್ಳ ಎಂದರೆ ಬಿಜೆಪಿಯವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿ, ಪ್ರಚೋದನಕಾರಿ ಭಾಷಣ ಮಾಡದಿದ್ದರೆ ಸುಮ್ಮನೆ ಪ್ರಕರಣ ದಾಖಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ದ್ವೇಷ ಭಾಷಣ ತಡೆ ಮಸೂದೆ ಕೆಲವರನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿದೆ ಎಂದು ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ದ್ವೇಷ ಭಾಷಣ ತಡೆ ಮಸೂದೆ ಕೆಲವರನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿದೆ ಎಂಬ ಬಿಜೆಪಿ ಆರೋಪ ಹಾಸ್ಯಾಸ್ಪದ. ಬಿಜೆಪಿ ಮಾತ್ರ ಏಕೆ ಇದನ್ನು ವಿರೋಧಿಸುತ್ತದೆ? ಪ್ರಚೋದನಕಾರಿ ಭಾಷಣ ಮಾಡುವವರು ಮಾತ್ರ ಭಯಪಡಬೇಕು. ಪ್ರಚೋದನಾಕಾರಿ ಭಾಷಣ ಮಾಡದೆ ಹೋದರೆ ಸುಮ್ಮನೆ ಪ್ರಕರಣ ದಾಖಲಿಸುವುದಿಲ್ಲ. ದ್ವೇಷ ಭಾಷಣದಿಂದ ಸಮಾಜದಲ್ಲಿ ಶಾಂತಿ ನೆಲೆಸುತ್ತದೆಯೇ? ಎಂದು ಪ್ರಶ್ನಿಸಿದರು.
‘ಸಮಾಜದಲ್ಲಿ ಶಾಂತಿ ಹಾಗೂ ಸಹೋದರತ್ವ ಕಾಪಾಡಲು ಕಾಯ್ದೆ ಜಾರಿ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ದ್ವೇಷ ಭಾಷಣ ಹೆಚ್ಚಾಗುತ್ತಿದೆ. ಅದನ್ನು ನಿಯಂತ್ರಿಸಲೆಂದೇ ನಾವು ಕ್ರಮ ಕೈಗೊಂಡಿದ್ದೇವೆ. ಬಿಜೆಪಿಯವರು ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತಿರುವುದು, ಅವರು ದ್ವೇಷ ಭಾಷಣ ಮಾಡುತ್ತಾರೆ ಎಂಬ ಕಾರಣಕ್ಕಾಗಿಯೇ’ ಎಂದು ಪ್ರತಿಪಾದಿಸಿದರು.
ಗೃಹಲಕ್ಷ್ಮಿ ಹಣ ಶೀಘ್ರ ಬಿಡುಗಡೆ:
ಫೆಬ್ರುವರಿ, ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆಯಾಗಿಲ್ಲ. ಪರಿಶೀಲಿಸಿ ಬಿಡುಗಡೆ ಮಾಡಲಾಗುವುದು ಎಂದು ಪ್ರತಿಕ್ರಿಯಿಸಿದರು. ಈವರೆಗೆ 23 ತಿಂಗಳ ಗೃಹಲಕ್ಷ್ಮಿ ಹಣವನ್ನು ಫಲಾನುಭವಿಗಳಿಗೆ ಕೊಟ್ಟಿದ್ದೇವೆ. ಹಣವಿಲ್ಲದೆ ಇದ್ದಿದ್ದರೆ ಇಷ್ಟೆಲ್ಲ ಕೊಡುವುದಕ್ಕೆ ಸಾಧ್ಯವಾಗುತ್ತಿತ್ತೇ? ಎಂದರು.
ಗೃಹಲಕ್ಷ್ಮಿ ಹಣವನ್ನು ಲಪಟಾಯಿಸಲಾಗಿದೆ ಎಂಬ ಬಿಜೆಪಿಯವರ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗುವಾಗ ಲಪಟಾಯಿಸುವ ಪ್ರಶ್ನೆ ಎಲ್ಲಿಂದ ಉದ್ಭವವಾಗುತ್ತದೆ? ಆ ಹಣವನ್ನು ಬೇರಾರೂ ತೆಗೆದುಕೊಳ್ಳಲಾಗುವುದಿಲ್ಲ. ಹಣ ಇನ್ನೂ ಬಿಡುಗಡೆಯಾಗಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.