Connect with us

ಇತರ

ಬೆಳಗಾವಿ: ಸಾವಿರಾರು ಕೋಟಿಯ ಒಡೆಯ ವಂಚಕ ಶಿವಂ ಅಸೋಸಿಯೇಟ್ಸ್ ಶಿವಾನಂದ ನೀಲಣ್ಣನವರ್ ಬಂಧನ!

Published

on

ಬೆಳಗಾವಿ: ಹೆಚ್ಚಿನ ಬಡ್ಡಿದರದ ಆಮಿಷ ಹಾಗೂ ಸೋಷಿಯಲ್ ಮೀಡಿಯಾ ಪ್ರಚಾರದ ಮೂಲಕ ಸಾರ್ವಜನಿಕರನ್ನು ನಂಬಿಸಿ, ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ‘ಶಿವಂ ಅಸೋಸಿಯೇಟ್ಸ್’ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣನವರ್‌ನನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುಮಾರು 4,500 ಕೋಟಿ ರೂಪಾಯಿ ಮೊತ್ತದ ಬೃಹತ್ ಹಗರಣದ ಆರೋಪದಡಿ ಈ ಕ್ರಮ ಕೈಗೊಳ್ಳಲಾಗಿದ್ದು, ಬೆಳಗಾವಿ ಜಿಲ್ಲಾದ್ಯಂತ ಭಾರೀ ಸಂಚಲನ ಮೂಡಿಸಿದೆ.
ವಿವಾದ ಹಾಗೂ ಪ್ರಚಾರದ ಹಿನ್ನೆಲೆ: ಕಳೆದ ಕೆಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹೂಡಿಕೆ ಕುರಿತು ಭಾರೀ ಪ್ರಚಾರ ಕೈಗೊಂಡಿದ್ದ ಶಿವಂ ಅಸೋಸಿಯೇಟ್ಸ್ ಸಂಸ್ಥೆ, ಸಾರ್ವಜನಿಕರನ್ನು ಆಕರ್ಷಿಸಲು ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿತ್ತು. ಅತಿ ಹೆಚ್ಚಿನ ಬಡ್ಡಿದರ ನೀಡುವುದಾಗಿ ಭರವಸೆ ನೀಡಿದ್ದಲ್ಲದೆ, ಮಾಲೀಕ ಶಿವಾನಂದ ನೀಲಣ್ಣನವರ್‌ ನೀಡುತ್ತಿದ್ದ ವಿವಾದಾತ್ಮಕ ಭಾಷಣಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಹಾಗೂ ಅನುಮಾನಕ್ಕೆ ಗ್ರಾಸವಾಗಿದ್ದವು.ಹಣಕಾಸು ವಂಚನೆಯ ದೂರುಗಳು ಹಾಗೂ ಸಂಶಯಾಸ್ಪದ ವ್ಯವಹಾರಗಳ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳ ತಂಡ, ನಿನ್ನೆ (ಮೇ 15) ಬೆಳಗಾವಿಯ ಶಿವಬಸವ ನಗರದಲ್ಲಿರುವ ಶಿವಂ ಅಸೋಸಿಯೇಟ್ಸ್‌ನ ಮುಖ್ಯ ಕಚೇರಿ ಸೇರಿದಂತೆ ಒಟ್ಟು ಎರಡು ಪ್ರಮುಖ ಸ್ಥಳಗಳ ಮೇಲೆ ದಿಢೀರ್ ದಾಳಿ ನಡೆಸಿತ್ತು. ದಿನವಿಡೀ ನಡೆದ ಈ ಕಾರ್ಯಾಚರಣೆಯಲ್ಲಿ ಕಚೇರಿಯಲ್ಲಿದ್ದ ಹಣಕಾಸು ವ್ಯವಹಾರಗಳ ಪ್ರಮುಖ ದಾಖಲೆಗಳು, ಸಾರ್ವಜನಿಕರಿಂದ ಸಂಗ್ರಹಿಸಲಾದ ಹೂಡಿಕೆಯ ವಿವರಗಳು ಹಾಗೂ ಸಂಸ್ಥೆಯ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಮಹತ್ವದ ಕಡತಗಳನ್ನು ಅಧಿಕಾರಿಗಳು ವಶಪಡಿಸಿಕೊಂಡು ತೀವ್ರ ಪರಿಶೀಲನೆ ನಡೆಸಿದ್ದರು.
ದಾಖಲೆಗಳ ಪರಿಶೀಲನೆಯ ಬೆನ್ನಲ್ಲೇ ಮೇ 15 ರಂದು ಶಿವಾನಂದ ನೀಲಣ್ಣನವರ್ ವಿರುದ್ಧ ಕಾನೂನು ಬಾಹಿರ ಹಣಕಾಸು ಚಟುವಟಿಕೆಗಳ ತಡೆ ಕಾಯ್ದೆಯಡಿ ಅಧಿಕೃತವಾಗಿ ಎಫ್‌ಐಆರ್ (FIR) ದಾಖಲಿಸಲಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಮಾಳಮಾರುತಿ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಆರೋಪಿಯನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದ್ದು, ವಂಚನೆಯ ಜಾಲ ಎಲ್ಲೆಲ್ಲಿ ಹರಡಿದೆ? ಸಾರ್ವಜನಿಕರಿಂದ ಲೂಟಿ ಮಾಡಿದ 4,500 ಕೋಟಿ ರೂಪಾಯಿ ಹಣ ಎಲ್ಲಿಗೆ ವರ್ಗಾವಣೆಯಾಗಿದೆ? ಎಂಬಿತ್ಯಾದಿ ಗಂಭೀರ ಆಯಾಮಗಳಲ್ಲಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿ ಆತಂಕದಲ್ಲಿದ್ದ ಸಾರ್ವಜನಿಕರು ಇದೀಗ ಪೊಲೀಸ್ ಕ್ರಮದತ್ತ ಕಣ್ಣಿಟ್ಟಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version