ಮಂಗಳೂರು: ಬಕ್ರೀದ್ ಹಿನ್ನೆಲೆಯಲ್ಲಿ ಮುಸ್ಲಿಮರ ಧಾರ್ಮಿಕ ಆಚರಣೆಗಳಿಗೆ ಅನುಕೂಲ ಕಲ್ಪಿಸಿಕೊಡುವಂತೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ. ಜಿಲ್ಲಾ ಸಮಿತಿ ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ.
ಮೇ 28ರಂದು ಬಕ್ರೀದ್ ಆಚರಣೆ ಮಾಡಲಾಗುತ್ತದೆ. ಹಾಗಾಗಿ ಲೀಗ್ ಜಿಲ್ಲಾಧ್ಯಕ್ಷ ಸಿ. ಅಬ್ದುಲ್ ರಹ್ಮಾನ್ ನೇತೃತ್ವದ ನಿಯೋಗವು ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ಮತ್ತು ಎಸ್ಪಿಗೆ ಮನವಿ ಸಲ್ಲಿಸಿ 3 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದೆ. ಬಕ್ರೀದ್ ಸಂದರ್ಭ ಮುಸ್ಲಿಮರು ಕುರ್ಬಾನಿ ಆಚರಣೆ ಮಾಡಲು ರಾಜ್ಯದ ಗೋಹತ್ಯೆ ನಿಷೇಧ ಕಾನೂನನ್ನು ಸಡಿಲಿಸ ಬೇಕು. ಪ್ರಾಣಿ ಬಲಿ ಅಥವಾ ಪ್ರಾಣಿಗಳ ಸಾಗಣೆಗೆ ಯಾವುದೇ ಸಂಘಟನೆಗಳು ಅಡ್ಡಿಪಡಿಸದಂತೆ ಸೂಕ್ತ ಭದ್ರತೆ ಒದಗಿಸಬೇಕು. ಮಂಗಳೂರಿನ ಕುದ್ರೋಳಿಯಲ್ಲಿರುವ ಕಸಾಯಿಖಾನೆಯನ್ನು 4 ವರ್ಷಗಳಿಂದ ಮುಚ್ಚಲಾಗಿದೆ. ಪರವಾನಗಿ ಪಡೆದ ಸೌಲಭ್ಯಗಳಲ್ಲಿ ಕಸಾಯಿ ಮಾಡಲು ಅವಕಾಶವಿದ್ದರೂ ಅದು ಮುಚ್ಚಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೂಡಲೇ ಅದನ್ನು ಪುನಾರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.